×
Ad

ಭಿನ್ನ ಮಾದರಿಯ ರಕ್ತ ವರ್ಗಕ್ಕೆ ಮೂತ್ರಪಿಂಡಗಳ ಯಶಸ್ವಿ ಜೋಡಣೆ: ಅಬುಧಾಬಿಯಲ್ಲಿ ಕುಂದಾಪುರ ಮೂಲದ ಡಾ.ಇಸ್ತಿಯಾಕ್ ತಂಡದಿಂದ ಸಾಧನೆ

Update: 2024-05-29 20:49 IST

ಕುಂದಾಪುರ: ವೈದ್ಯಲೋಕಕ್ಕೆ ಸವಾಲಾಗಿರುವ ಎರಡು ಭಿನ್ನ ಮಾದರಿಯ ರಕ್ತ ವರ್ಗಕ್ಕೆ ಸೇರಿದ ಮೂತ್ರ ಪಿಂಡಗಳನ್ನು ಯಶಸ್ವಿಯಾಗಿ ಜೋಡಿಸಿರುವ ಕೀರ್ತಿಗೆ ಕುಂದಾಪುರ ಮೂಲದ ಡಾ.ಇಸ್ತಿಯಾಕ್ ಮತ್ತು ಅವರ ತಂಡ ಪಾತ್ರವಾಗಿದೆ.

ವೈದ್ಯ ಲೋಕದಲ್ಲಿ ತೀರಾ ಅಪರೂಪದ್ದಾಗಿರುವ ಎಬಿಒ ಹೊಂದಾಣಿಕೆ ಯಾಗದ ಅತ್ಯಂತ ಸಂಕೀರ್ಣವಾದ ಈ ಶಸ್ತ್ರ ಚಿಕಿತ್ಸೆಯು ಡಾ.ಇಸ್ತಿಯಾಕ್ ಸೇವೆ ಸಲ್ಲಿಸುತ್ತಿರುವ ಅಬುದಾಭಿಯ ಖ್ಯಾತ ಆಸ್ಪತ್ರೆ ಬುರ್ಜೀಲ್ ಮೆಡಿಕಲ್ ಸಿಟಿಯಲ್ಲಿ ನಡೆದಿದ್ದು ವೈದ್ಯರ ಸಾಧನೆಯನ್ನು ಗಲ್ಫ್ ಮಾಧ್ಯಮಗಳು ಹೆಡ್ ಲೈನ್‌ನಲ್ಲಿ ಬಣ್ಣಿಸಿವೆ.

ಅನಿವಾಸಿ ಭಾರತಿಯರಾಗಿರುವ ರೇವತಿ ಹಾಗು ಕಾರ್ತಿಕೇಯನ್ ದಂಪತಿ ತಮ್ಮ ಎರಡು ಪುಟ್ಟ ಮಕ್ಕಳೊಂದಿಗೆ ಅಬುಧಾಬಿಯಲ್ಲಿ ವಾಸವಾಗಿದ್ದಾರೆ. 2018ರಿಂದ 32ರ ಹರೆಯದ ರೇವತಿ ಅವರ ಮೂತ್ರ ಪಿಂಡಗಳಲ್ಲಿ ಸೋಂಕು ಕಂಡು ಬಂದಿತ್ತು. 2022ರ ನಂತರ ಹಿಮೋ ಡಯಾಲಿಸಿಸ್ ನಂತಹ ಹಲವು ಚಿಕಿತ್ಸೆಗಳ ನಂತರವೂ ಹೃದಯ ಸ್ತಂಭನದಿಂದ ಪ್ರಾಣಕ್ಕೆ ಕಂಟಕವಾಗಿ ನಿಷ್ಕ್ರಿಯಗೊಂಡ ಅವರ ಮೂತ್ರ ಪಿಂಡಗಳನ್ನು ಬದಲಾಯಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿತ್ತು.

ಹಾಗಾಗಿ ದಂಪತಿ, ಮೃತದೇಹಗಳ ಸಹಿತ ಇನ್ನಿತರ ಜೀವಂತ ಕಿಡ್ನಿ ದಾನಿಗಳ ಮೊರೆ ಹೋದರೂ ಯಾವುದೇ ಫಲ ಸಿಗಲಿಲ್ಲ. ಇದರಿಂದ ರೇವತಿ ಸ್ಥಿತಿ ದಿನೇ ದಿನೇ ಹದಗೆಡಲು ಆರಂಭಿಸಿತು. ಈ ಸಂದರ್ಭದಲ್ಲಿ ಮಗಳ ನೋವನ್ನು ಸಹಿಸ ಲಾಗದ ರೇವತಿ ತಂದೆ ತಮ್ಮ ಮೂತ್ರ ಪಿಂಡವನ್ನು ಮಗಳಿಗೆ ದಾನ ನೀಡಲು ಮುಂದಾದರು.

ವಿಪರ್ಯಾಸವೆಂದರೆ ತಂದೆ ಮಗಳ ರಕ್ತ ಮಾದರಿ ಹೋಲಿಕೆಯಾದರೂ ಹೃದಯ ಸಮಸ್ಯೆ ಹಾಗೂ ಹೆಚ್ಚಿನ ಮಟ್ಟದ ರಕ್ತದೊತ್ತಡದ ಕಾರಣದಿಂದ ರೇವತಿ ಅವರ ತಂದೆಯ ಮೂತ್ರಪಿಂಡಗಳ ಕಸಿಯನ್ನು ಕೊನೆ ಕ್ಷಣಗಳಲ್ಲಿ ಅನರ್ಹ ಗೊಳಿಸಲಾಯಿತು. ಪತ್ನಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕಿತ್ತು. ತನ್ನ ಮೂತ್ರಪಿಂಡವನ್ನು ನೀಡಲು ಪತಿ ಕಾರ್ತಿಕೇಯನ್ ತುದಿಗಾಲಿ ನಲ್ಲಿ ನಿಂತಿದ್ದರೂ ರಕ್ತ ಮಾದರಿ ಬೇರೆಯಾಗಿದ್ದರಿಂದ ಮೂತ್ರಪಿಂಡ ಕಸಿಯ ದುಸ್ಸಾಹಸಕ್ಕೆ ಮುಂದಾಗದ ವೈದ್ಯರು ಕೈಚೆಲ್ಲಿದ್ದರು.

ಧೃತಿ ಗೆಡದ ಕಾರ್ತಿಕೇಯನ್: ಭಿನ್ನ ಮಾದರಿಯ ರಕ್ತವಾದರೂ ಮೂತ್ರ ಪಿಂಡದ ಕಸಿ ಸಾಧ್ಯತೆ ಇದೆ ಎಂಬ ಮಾಹಿತಿ ಪಡೆದ ದಂಪತಿ, ಅಬುಧಾಬಿ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿರುವ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್ ಪ್ಲಾಂಟ್ ತಜ್ಞ ಡಾ.ಇಸ್ತಿಯಾಕ್ ಅಹ್ಮದ್ ಅವರನ್ನು ಸಂಪರ್ಕಿಸಿದರು. ಇದರಿಂದ ರೇವತಿ ಬದುಕುಳಿಯುವ ಆಸೆ ಮತ್ತೆ ಚಿಗುರೊಡೆಯಿತು.

ನಂತರ ಬುರ್ಜಿಲ್ ಆಸ್ಪತ್ರೆಯ ಡಾ.ಇಸ್ತಿಯಾಕ್ ನೇತೃತ್ವದ ಡಾ.ರೀಹಾನ್ ಸೈಫ್, ಡಾ.ವೆಂಕಟ್ ಸೈನರೇಶ್, ಡಾ.ರಾಮಮೂರ್ತಿ ಜಿ.ಭಾಸ್ಕರನ್, ಡಾ. ನಿಕೋಲಸ್ ವ್ಯೆನ್ ಮತ್ತು ನೆಫ್ರಾಲಜಿಸ್ಟ್ ವೈದ್ಯ ತಂಡವು ರೇವತಿ ಅವರ ಮೂತ್ರ ಪಿಂಡ ಕಸಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹಲವು ದಿನಗಳ ತುರ್ತು ನಿಗಾ ಘಟಕದ ನಂತರ ರೇವತಿ ಅವರ ದೇಹವು ಮೂತ್ರಪಿಂಡ ಕಸಿಗೆ ಹೊಂದಿಕೊಂಡಿದ್ದು ಅವರು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ.

ಕುಂದಾಪುರದ ಉದ್ಯಮಿ ಹಾಜಿ ಅಬ್ದುಲ್ ಖಾದರ್ ಯೂಸುಫ್ ಅವರ ಪುತ್ರರಾಗಿರುವ ಡಾ.ಇಸ್ತಿಯಾಕ್, ಕುಂದಾಪುರ ಗರ್ಲ್ಸ್ ಶಾಲೆ, ಸೈಂಟ್ ಮೇರಿ ಹೈಸ್ಕೂಲ್, ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನ ಕೆ.ಎಂ.ಸಿ. ಯಲ್ಲಿ ಎಂಬಿಬಿಎಸ್, ಎಂ.ಡಿ ಪದವಿ ಪಡೆದು, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಡಿಎಂ ಪುರಸ್ಕೃರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಸಹಿತ ಹಲವು ಖ್ಯಾತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಇದೀಗ ಅಬುದಾಭಿಯ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದಾರೆ.

‘ರೇವತಿಯವರ ವಿಷಯದಲ್ಲಿ, ಹೆಚ್ಚುವರಿಯಾಗಿ ಮೊದಲೇ ಅಸ್ತಿತ್ವದಲ್ಲಿರುವ ಪ್ರತಿಕಾಯಗಳನ್ನು ತೊಡೆದುಹಾಕಲು ಪ್ಲಾಸ್ಮಾಫೆರೆಸಿಸ್ ಅನ್ನು ನಡೆಸಲಾಯಿತು. ಕಸಿ ಮಾಡುವ ಮೊದಲು ವಿಶೇಷ ಚುಚ್ಚುಮದ್ದಿನ ಮೂಲಕ ಹೊಸ ಪ್ರತಿ ಕಾಯಗಳ ರಚನೆಯನ್ನು ನಿಗ್ರಹಿಸಲಾಯಿತು. ನಾವು ಕುಟುಂಬಕ್ಕೆ ಸಾಧಕ- ಬಾಧಕಗಳನ್ನು ವಿವರಿಸಿದ ನಂತರ ಹೊಂದಾಣಿಕೆಯಾಗದ ಕಿಡ್ನಿ ಕಸಿ ಮಾಡಲು ನಿರ್ಧರಿಸಿದ್ದೇವು. ರೋಗಿಯು ಸಹ ಕಸಿ ಮಾಡಲು ಬಹಳ ಉತ್ಸುಕರಾಗಿದ್ದ ರಿಂದ, ನಾವು ಮುಂದೆ ಹೋದೆವು. ನಾಲ್ಕು ಗಂಟೆಗಳ ಕಾಲ ರೊಬೋಟಿಕ್ ತಂತ್ರಜ್ಞಾನದಿಂದ ಕಸಿ ಕ್ರಿಯೆಯನ್ನು ನಡೆಸಲಾಯಿತು’

-ಡಾ.ಇಸ್ತಿಯಾಕ್ ಅಹಮದ್, ವೈದ್ಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News