×
Ad

ನನಗೂ ರಘುಪತಿ ಭಟ್‌ಗೂ ನೇರ ಹಣಾಹಣಿ: ಎಸ್.ಪಿ.ದಿನೇಶ್

Update: 2024-05-29 20:53 IST

ಉಡುಪಿ, ಮೇ 29: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಈ ಚುನಾವಣೆಯಲ್ಲಿ ಗೌಣ ಆಗಿದ್ದಾರೆ. ಬಿಜೆಪಿ ಅಭ್ಯರ್ಥಿ ಸರ್ಜಿ ಬಗ್ಗೆ ಮತದಾರರಿಗೆ ಹೊಸಬರು ಮತ್ತು ಯಾರಿಗೂ ಪರಿಚಯವೇ ಇಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ನನಗೂ ರಘುಪತಿ ಭಟ್‌ಗೂ ನೇರ ಹಣಾಹಣಿ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ, ಕ್ರೈಸ್ತ ಮಿಶನರಿಗಳ ಮೇಲೆ ನಡೆದ ದಾಳಿಯ ಪರವಾಗಿ ಇದ್ದ, ಸಿದ್ಧರಾಮಯ್ಯ ಅವರಿಗೆ ಏಕವಚನದಲ್ಲಿ ಬೈದ ಹಾಗೂ ರಾಹುಲ್ ಗಾಂಧಿಯನ್ನು ಅವಮಾನ ಮಾಡಿದ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ನೀಡಿರುವುದು ದೊಡ್ಡ ದುರಂತ. ನನ್ನ ಸ್ಪರ್ಧೆ ಆಯನೂರು ಮಂಜುನಾಥ್ ವಿರುದ್ಧವೇ ಹೊರತು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾದರೆ ಅದಕ್ಕೆ ಚುನಾವಣಾ ಆಯೋಗವೇ ನೇರ ಹೊಣೆ. ಯಾಕೆಂದರೆ ಮತದಾರರ ಪಟ್ಟಿಯಲ್ಲಿ ಯಾವುದೇ ಮತದಾರರ ವಿಳಾಸವನ್ನು ಹಾಕಿಲ್ಲ. ಹಾಗಾಗಿ ನಾವು ಮತದಾರರಿಗೆ ಕಳುಹಿಸಿದ ಬಹುತೇಕ ಪತ್ರಗಳು ವಾಪಾಸ್ಸು ಬಂದಿವೆ. ಆದು ದರಿಂದ ಆಯೋಗ ರವಿವಾರದ ಒಳಗೆ ಮತದಾರರ ಬೂತ್‌ ಗಳ ಮಾಹಿತಿ ಯನ್ನು ತಲುಪಿಸುವ ಕಾರ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥ್, ಈಶ್ವರ, ಸದಾಶಿವ, ಎಲ್.ನಾದನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News