ಪ್ರೌಢಶಾಲಾ ಶಿಕ್ಷಕರಿಗೆ ‘ಕಲಿಕಾ ಫಲ ಆಧಾರಿತ ಬೋಧನೆ’ ತರಬೇತಿ
ಉಡುಪಿ, ಜೂ.11: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಮೇಶ್ ಯು ಪೈ ಮಾನವ ಸಂಪನ್ಮೂಲಾಭಿವೃದ್ಧಿ ಕೇಂದ್ರ ಮಣಿಪಾಲ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ (ಡಯಟ್), ಉಡುಪಿ ರೋಟರಿ ಕ್ಲಬ್ ಉಡುಪಿ ಇವರ ಸಹಯೋಗದಲ್ಲಿ ಉಡುಪಿ ಮತ್ತು ಬ್ರಹ್ಮಾವರ ವಲಯದ ಅನುದಾನ ರಹಿತ ಪ್ರೌಢಶಾಲಾ ಶಿಕ್ಷಕರಿಗೆ ಕಲಿಕಾ ಫಲ ಆಧಾರಿತ ಬೋಧನಾ ವಿಧಾನ ವಿಷಯದಲ್ಲಿ ಎರಡು ದಿನಗಳ ತರಬೇತಿಯನ್ನು ಮಣಿಪಾಲ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಹಮ್ಮಿಕೊಳ್ಳಲಾಯಿತು.
ತರಬೇತಿ ಶಿಬಿರವನ್ನು ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ ಪೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನದಿಂದ ಬಹಳಷ್ಟು ಪ್ರಯೋಜನವಿದ್ದು, ಸೆಲ್ಕೋ ಪೌಂಢೇಶನ್ ಅನೇಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸಿನ ಸೌಲಭ್ಯವನ್ನು ನೀಡಿದೆ. ಸಂಸ್ಥೆ ಅದರ ಸಂಪೂರ್ಣ ಪ್ರಯೋಜನ ಪಡೆದುಕೊಂಡಲ್ಲಿ ತರಗತಿಯ ಬೋಧನೆಯು ಇನ್ನಷ್ಟು ಪರಿಣಾಮಕಾರಿಯಾಗಬಲ್ಲುದು ಎಂದು ಅಭಿಪ್ರಾಯ ಪಟ್ಟರು.
ಡಯಟ್‌ನ ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಮಾತನಾಡಿ, ಕಾಲಕಾಲಕ್ಕೆ ಶಿಕ್ಷಣ ಪದ್ಧತಿಯಲ್ಲಿ ಉಂಟಾಗುವ ಬದಲಾವಣೆ ಕುರಿತಂತೆ ಆ ಬಗ್ಗೆ ಶಿಕ್ಷಕರಿಗೆ ತರಬೇತಿಯ ಅಗತ್ಯವಿದೆ. ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಇಂಥ ಯಾವುದೇ ತರಬೇತಿ ಸದ್ಯ ಸಿಗುತ್ತಿಲ್ಲ ಎಂದರು.
ಮುಖ್ಯ ಅತಿಥಿ ರೋಟರಿ ಕ್ಲಬ್‌ನ ದೀಪಾ ಭಂಡಾರಿ ಅವರು ಮಾತನಾಡಿದರು. ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಆಶೋಕ ಕಾಮತ್, ಬಾಸುಮ ಕೊಡಗು, ದಿನೇಶ್ ಪ್ರಭು, ಪ್ರಭಾಕರ ಮಿತ್ಯಂತ, ಸುರೇಶಮರಕಾಲ, ಸದಾನಂದ, ಯೋಗ ನರಸಿಂಹ ಸ್ವಾಮಿ ಭಾಗವಹಿಸಿದ್ದರು.
ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಅತಿಥಿಗಳನ್ನು ಸ್ವಾಗತಿಸಿದರು. ಕ್ಷಮಾ ವಂದಿಸಿ, ಗೀತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲೆಯ 55 ಮಂದಿ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದರು. ಎರಡನೇ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಇನ್ನಷ್ಟು ಇಂಥ ತರಬೇತಿಗಳ ಅಗತ್ಯವನ್ನು ಪ್ರತಿಪಾದಿಸಿದರು. ಅಲೆವೂರು ಶಾಂತಿನಿಕೇತನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ರೂಪಾ ಕಿಣಿ ವಂದಿಸಿದರು.