×
Ad

ಜನಸ್ಪಂದನದಲ್ಲಿ ಬಂದ ಅಹವಾಲುಗಳನ್ನು ಶೀಘ್ರವೇ ವಿಲೇ ಮಾಡಿ: ಉಡುಪಿ ಡಿಸಿ ವಿದ್ಯಾಕುಮಾರಿ

Update: 2024-06-26 20:56 IST

ಹೆಬ್ರಿ, ಜೂ.26: ಜನಸ್ಪಂದನ ಸಭೆಯಲ್ಲಿ ಬಂದಂತಹ ಅಹವಾಲುಗಳನ್ನು ಇಲಾಖಾ ಅಧಿಕಾರಿಗಳು ಕಾನೂನು ಪ್ರಕಾರ ಶೀಘ್ರವೇ ವಿಲೇವಾರಿ ಮಾಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಬುಧವಾರ ಹೆಬ್ರಿಯ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಒಂದೊಮ್ಮೆ ಅದು ಸರಕಾರದ ಹಂತದಲ್ಲಿ ಬಗೆ ಹರಿಸುವಂತಿದ್ದಲ್ಲಿ ಅದನ್ನು ಸರಕಾರದ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಿ ಅವುಗಳ ಫಾಲೋಅಪ್ ಮಾಡಬೇಕು ಎಂದು ಅವರು ಸೂಚಿಸಿದರು.

ಹೆಬ್ರಿ ಪೊಲೀಸ್ ಠಾಣೆ ಸ್ಥಳಾಂತರಗೊಂಡು ಕಾಡಿನ ಮದ್ಯೆ ಇರುವುದರಿಂದ ಜನಸಾಮಾನ್ಯರಿಗೆ, ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ದೂರು ನೀಡಲು ತೊಂದರೆಯಾಗುತ್ತಿದೆ. ದಾರಿದೀಪಗಳು ಸರಿಯಾಗಿ ಇರುವುದಿಲ್ಲ. ತುರ್ತು ದೂರು ನೀಡಲು ಕಷ್ಟವಾಗುತ್ತಿದೆ ಎಂದು ಹೆಬ್ರಿಯ ಪ್ರಗತಿಪರ ನಾಗರಿಕ ಸೇವಾ ಸಮಿತಿ ತನ್ನ ಅಹವಾಲು ಸಲ್ಲಿಸಿತು.

ಹೆಬ್ರಿ ನಗರದಲ್ಲಿ ಮೋಟಾರು ವಾಹನ ಚಾಲಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದು ಸಾಮಾನ್ಯ ವಾಗಿದೆ. ಇದಕ್ಕೆ ಕಡಿವಾಣ ಹಾಕಲು ಈ ಮೊದಲು ಇದ್ದ ಸ್ಥಳದಲ್ಲೇ ಪೊಲೀಸ್ ಠಾಣೆ ತೆರೆಯಬೇಕು ಎಂದು ಸಮಿತಿ ಸಲ್ಲಿ ಸಿದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಇದು ಸರಕಾರ ಮಟ್ಟದಲ್ಲಿ ಆಗಬೇಕಾಗಿರುವುದರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

ಪ್ರಗತಿಪರ ನಾಗರಿಕ ಸೇವಾ ವೇದಿಕೆಯು ನೂತನವಾಗಿ ರಚನೆಯಾಗಿರುವ ತಾಲೂಕಿಗೆ ಕೆಲವು ತಾಲೂಕು ಮಟ್ಟದ ಕಚೇರಿಗಳು, ನ್ಯಾಯಾಲಯ, ಸಬ್ ರಿಜಿಸ್ಟರ್, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ತಾಲೂಕು ಆಸ್ಪತ್ರೆಯನ್ನಾಗಿಸಬೇಕು ಎಂದು ಸಲ್ಲಿಸಿದ ಮನವಿಗೆ ಸ್ಪಂಧಿಸಿದ ಡಿಸಿ, ಈಗಾಗಲೇ ಸರಕಾರದ ಹಂತದಲ್ಲಿ ಕೆಲವು ಪ್ರಸ್ತಾವನೆ ಇದ್ದು, ಈ ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ ಇನ್ನೊಮ್ಮೆ ಪತ್ರ ಬರೆಯಲಾಗುವುದು ಹಾಗೂ ಪ್ರಸ್ತಾವನೆಗಳು ಹೊಸದಾಗಿ ಹೋಗುವುದಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಾರಾ ಗ್ರಾಮದ ಹಿರಿಯಣ್ಣ ಶೆಟ್ಟಿ ಅವರು ಕೃಷಿ ಸಾಲ ಅಡಮಾನ ಪತ್ರ ನೋಂದಾವಣೆಗೆ ಕಾವೇರಿ ತಂತ್ರಾಂಶದಲ್ಲಿ ನಮೂನೆ 11 ಇ-ನಕಾಶೆ ಅವಶ್ಯಕತೆ ಇದೆ ಎಂದು ತಪ್ಪು ಮಾಹಿತಿ ನೀಡಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು, ನಾನು ನನ್ನ ಕೃಷಿ ಅಭಿವೃದ್ಧಿಗೆ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ನನ್ನ ಹಕ್ಕಿನ ಕೃಷಿ ಆಸ್ತಿಗಳ ಜವಾಬ್ದಾರಿ ಯಿಂದ ಪಡೆದಿರುವ ಸಾಲದ ಮರು ಪತ್ರವನ್ನು ಕೂಡಲೇ ಬ್ರಹ್ಮಾವರ ಸಬ್ ರಿಜಿಸ್ಟರ್ ಆಫೀಸಿನಲ್ಲಿ ನೋಂದಾಯಿಸಿ ಕೊಡುವಂತೆ ಸಲ್ಲಿಸಿದ ಅರ್ಜಿಗೆ ಜಿಲ್ಲಾಧಿಕಾರಿ ಗಳು ಭೂದಾಖಲೆಗಳ ಅಧಿಕಾರಿಗಳಿಗೆ ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದರು.

ಮನೆ ಹಾಗೂ ಜಮೀನಿಗೆ ಹೋಗಲು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕೆಂದು ಬಂದಂತಹ ಅಹವಾಲುಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಹಲವು ವರ್ಷಗಳಿಂದ ರಸ್ತೆಗಳಿದ್ದಲ್ಲಿ ನಿಯಮಾನುಸಾರ ರಸ್ತೆ ಮಾಡಿಕೊಡಲು ಮುಂದಾಗಬೇಕು. ಒಂದೊಮ್ಮೆ ಖಾಸಗಿ ವ್ಯಕ್ತಿಗಳ ಜಾಗ ಇದ್ದಲ್ಲಿ ಅವರೊಂದಿಗೆ ಸೌಹರ್ದಯುತವಾಗಿ ಅನುಮತಿ ಪಡೆದು ರಸ್ತೆ ನಿರ್ಮಾಣ ಮಾಡಬೇಕು. ಅದು ಸಾಧ್ಯವಾಗದೇ ಇದ್ದಲ್ಲಿ ಅರ್ಜಿದಾರರು ಕಾನೂನಿನಡಿ ನ್ಯಾಯಾಲಯಕ್ಕೆ ಹೋಗಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್‌ಪಿ ಡಾ.ಅರುಣ್ ಕೆ, ಸಹಾಯಕ ಕಮಿಷನರ್ ರಶ್ಮಿ, ತಹಶೀಲ್ದಾರ್ ಪ್ರಸಾದ್, ತಾಲೂಕು ಪಂಚಾಯತ್ ಇಓ ಶಶಿಧರ್ ಕೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಒಟ್ಟು 45 ಅರ್ಜಿಗಳು ಸ್ವೀಕೃತ

ಹೆಬ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಇಲಾಖಾವಾರು ಒಟ್ಟು 45 ಅರ್ಜಿಗಳು ಸ್ವೀಕೃತವಾಗಿದ್ದು, ಪೊಲೀಸ್ ಇಲಾಖೆಯ 01, ಆರೋಗ್ಯ ಇಲಾಖೆ-1, ಅರಣ್ಯ ಇಲಾಖೆ-2, ಸರ್ವೇ ಇಲಾಖೆ-2, ಕಂದಾಯ ಇಲಾಖೆ-17, ಕೃಷಿ/ತೊಟಗಾರಿಕೆ ಇಲಾಖೆ-3, ಸಾರಿಗೆ ಇಲಾಖೆ-7, ಆಹಾರ ಇಲಾಖೆ-2, ನೋಂದಣಿ ಇಲಾಖೆ-1, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-1, ಲೋಕೋಪಯೋಗಿ/ ಮೆಸ್ಕಾಂ-2, ಮೆಸ್ಕಾಂ/ ಸರ್ವೇ ಇಲಾಖೆ-1, ಪಂಚಾಯತ್ ರಾಜ್ ಇಲಾಖೆ-3, ಜಿಲ್ಲಾ ನಿಬಂಧಕರು, ಸಹಕಾರ ಇಲಾಖೆ-1, ಸಾರಿಗೆ/ ಕಂದಾಯ ಇಲಾಖೆ-1 ಅರ್ಜಿಗಳು ಸ್ವೀಕೃತವಾದವು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News