ವ್ಯಸನ ಮುಕ್ತ ಸಮಾಜಕ್ಕೆ ಎಲ್ಲರೂ ಕೈಜೋಡಿಸಿ: ಉಡುಪಿ ಎಡಿಸಿ ಮಮತಾ ದೇವಿ
ಉಡುಪಿ, ಜೂ.26: ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಜೊತೆಗೆ ಸ್ವಯಂ ಪ್ರೇರಿತರಾಗಿ ಮಾದಕ ವಸ್ತುಗಳ ಸೇವನೆಯನ್ನು ವಿರೋಧಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದ್ದಾರೆ.
ನಗರದ ಅಜ್ಜರಕಾಡು ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಯು.ಜಿ. ಸಭಾಂಗಣದಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಹಾಗೂ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾದಕ ವ್ಯಸನ ವಿರೋಧಿ ಘಟಕ, ಕೌನ್ಸಲಿಂಗ್ ಸೆಲ್, ರೇಂಜರ್ಸ್ ಯುನಿಟ್ ಹಾಗೂ ಐಕ್ಯೂಎಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆದ ಮಾಹಿತಿ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಡ್ರಗ್ಸ್ ಸೇವನೆ ಮಾನಸಿಕ ಕಾಯಿಲೆಯ ಲಕ್ಷಣ. ಮಾದಕ ವ್ಯಸನಕ್ಕೆ ಒಳಗಾದವರು ವ್ಯಸನಮುಕ್ತರಾಗಬೇಕು ಹಾಗೂ ಇದರಿಂದ ಉಂಟಾಗುವ ಮಾನಸಿಕ ಮತ್ತು ದೈಹಿಕ ಕೆಡುಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ದಿಂದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಚರಣೆಯು ಈ ಒಂದು ದಿನಕ್ಕೆ ಮಾತ್ರ ಸೀಮಿತವಾ ಗಿರದೇ ಇವುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ನಿರಂತರವಾಗಿ ಅರಿವು ಮೂಡಿಸುವ ಕೆಲಸ ವಾಗಬೇಕು ಎಂದರು.
ಮಾನಸಿಕ ಖಿನ್ನತೆ ಯಾರಿಗೂ ಕಾಣದ ದೊಡ್ಡ ಪಿಡುಗು. ಸಣ್ಣ-ಪುಟ್ಟ ಕಾರಣಗಳಿಗೆ, ಸೂಕ್ಷ್ಮ ವಿಷಯಗಳ ಕಾರಣದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯು ತನಗೆ ಅರಿವಿಲ್ಲದಂತೆ ಮಾದಕ ವ್ಯಸನಿಯಾಗುತ್ತಾನೆ. ಈ ದುಶ್ಚಟಕ್ಕೆ ಬಲಿ ಯಾದ ವ್ಯಕ್ತಿ ಅನೇಕ ಕಾನೂನು ವಿರೋಧಿ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದವರು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ. ಕೆ ಮಾತನಾಡಿ, ಮಾದಕ ವಸ್ತು ಸೇವನೆಯು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಆರೋಗ್ಯದ ಮೇಲೆ ಹಲವು ರೀತಿಯ ದುಷ್ಪರಿಣಾಮ ಉಂಟಾಗುತ್ತದೆ. ಆಲ್ಕೋಹಾಲ್, ಸಿಗರೇಟ್, ತಂಬಾಕು, ಡ್ರಗ್ಸ್, ಅಫೀಮು, ಕೊಕೇನ್‌ನಂತಹ ಮಾದಕ ದ್ರವ್ಯಗಳಿಗೆ ಜಾಗತಿಕ ಮಾರುಕಟ್ಟೆ ಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಇವುಗಳ ದುಷ್ಪರಿಣಾಮಗಳ ಅರಿವಿದ್ದರೂ ಯುವಜನತೆ ವ್ಯಸನಿಗಳಾಗಿ ತಮ್ಮ ಜೀವವನ್ನೇ ಕಳೆದು ಕೊಳ್ಳುತ್ತಿದ್ದಾರೆ ಎಂದರು.
ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಶಾ ಮುಕ್ತ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯುವಜನತೆ ಬೆನ್ನೆಲು ಬಾಗಿ ನಿಲ್ಲಬೇಕು. ನಶಾ ಮುಕ್ತ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರು ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ರೇಂಜರ್ಸ್ ಯುನಿಟ್‌ನ ಸಂಚಾಲಕಿ ರಮ್ಯ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ಆಯೋಜಿಸ ಲಾದ ವಿವಿಧ ಸ್ಫರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜೆ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿ ಯರು ಉಪಸ್ಥಿತರಿದ್ದರು.
ಮಾದಕ ದ್ರವ್ಯ ವಿರೋಧಿ ಘಟಕದ ಸಂಚಾಲಕಿ ಶುಭಾ ಬಿ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಶಿವಾಜಿ ವಂದಿಸಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.