×
Ad

ಕುಂದಾಪುರ| ಆನಗಳ್ಳಿಯಲ್ಲಿ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

Update: 2024-07-24 21:02 IST

ಉಡುಪಿ/ಕುಂದಾಪುರ: ಜಿಲ್ಲೆಯಲ್ಲಿ ಮಳೆಯ ವೇಗ, ಪ್ರಮಾಣ ತಗ್ಗಿದರೂ, ಆಗಾಗ ಗಾಳಿ ಸಹಿತ ಸುರಿಯುವ ಮಳೆಯಿಂದ ಹಾನಿಯ ಪ್ರಮಾಣ ಮಾತ್ರ ನಿರಂತರವಾಗಿ ಮುಂದುವರಿದಿದೆ. ದಿನದಲ್ಲಿ ಮನೆ ಹಾನಿಯ 40 ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅಲ್ಲದೇ ತೋಟಗಾರಿಕಾ ಬೆಳೆ ಹಾನಿಯ ಎಂಟು ಪ್ರಕರಣಗಳು ವರದಿಯಾಗಿದ್ದು ಎರಡು ಲಕ್ಷರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರದ ಆನಗಳ್ಳಿ ಕಳುವಿನ ಹತ್ತಿರ ಆನಗಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಜು.24ರಂದು ಬೀಸಿದ ಭಾರೀ ಗಾಳಿ ಮಳೆ ಯಿಂದ ಸ್ಥಳೀಯರಾದ ಜಾರ್ಜ್ ಬರೆಟ್ಟೊ ಇವರ ಜಾಗದಲ್ಲಿ 3 ಅಡಿಕೆ ಮರ ಮತ್ತು ಒಂದು ತೆಂಗಿನ ಮರ ಬಿದ್ದು ಸಾವಿರಾರು ರೂ.ಗಳ ಸೊತ್ತು ನಷ್ಟ ಉಂಟಾಗಿದೆ.

ತೆಂಗಿನ ಮರವು ತುಂಡಾಗಿ ಜಾರ್ಜ್ ಬರೆಟ್ಟೊ ಇವರ ಹಳೆಯ ಮನೆ ಮೇಲೆ ಬಿದ್ದು, ತಗಡಿನ ಛಾವಣಿಗೆ ಮತ್ತು ಮನೆಯ ಬಾವಿಗೆ ಕೂಡ ಹಾನಿಯಾಗಿದೆ. ಬಾವಿಯ ಎರಡು ಕಂಬಗಳಿಗೆ ಹಾನಿಯಾಗಿದ್ದಲ್ಲದೆ, ಪಂಪ್‌ಸೆಟ್‌ಗೂ ಹಾನಿಯಾಗಿದೆ. ಇದರಿಂದ ಒಟ್ಟಾರೆಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವುದಾಗಿ ಹೇಳಲಾಗಿದೆ.

ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ನೀಡಲಾದ ಜಿಲ್ಲೆಯಲ್ಲಿ ವಿವಿಧ ಹಾನಿಗಳಿಂದ ಸುಮಾರು ೧೫ ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ 41 ಮನೆಗಳಿಗೆ ಸುಮಾರು 13 ಲಕ್ಷರೂ.ಗಳ ನಷ್ಟ ಸಂಭವಿಸಿದ್ದರೆ, ಕುಂದಾಪುರ ತಾಲೂಕಿನಲ್ಲಿ ಸಂಭವಿಸಿದ ಏಳು ತೋಟಗಾರಿಕಾ ಬೆಳೆ ಹಾನಿಯ ಪ್ರಕರಣ ಹಾಗೂ ಒಂದು ಕೊಟ್ಟಿಗೆ ಹಾನಿ ಪ್ರಕರಣಗಳಿಂದ 2 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ.

ಇಂದು ಕಾರ್ಕಳ ತಾಲೂಕಿನಲ್ಲಿ 19 ಮನೆ ಹಾನಿ ಪ್ರಕರಣಗಳು ವರದಿಯಾಗಿದ್ದು ಸುಮಾರು ಆರು ಲಕ್ಷರೂ.ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ 12 ಮನೆ ಹಾನಿ ಪ್ರಕರಣಗಳಲ್ಲಿ ನಾಲ್ಕು ಲಕ್ಷ ನಷ್ಟದ ಅಂದಾಜು ಮಾಡಿದ್ದರೆ ಉಡುಪಿ ತಾಲೂಕಿನ ಐದು ಪ್ರಕರಣಗಳಲ್ಲಿ ಒಂದು ಲಕ್ಷ ರೂ., ಬೈಂದೂರಿನ ಎರಡು ಪ್ರಕರಣಗಳಿಂದ 1.75ಲಕ್ಷ ಹಾಗೂ ಕಾಪುವಿನ ಮೂರು ಪ್ರಕರಣಗಳಿಂದ 85 ಸಾವಿರ ರೂ.ನಷ್ಟ ಉಂಟಾಗಿದೆ.

ಮಂಗಳವಾರವೂ ಜಿಲ್ಲೆಯಲ್ಲಿ ಮನೆ ಹಾನಿಯ ಒಟ್ಟು 24 ಪ್ರಕರಣಗಳು ದಾಖಲಾಗಿದ್ದು, ಇದರಿಂದ ಸುಮಾರು 13 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಹಾಗೂ ಹಾರಾಡಿ ಗ್ರಾಮಗಳಲ್ಲಿ ರೇಣುಕಾ ಹಾಗೂ ಜಲಜ ಶೆಟ್ಟಿ ಎಂಬವರ ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆಯೂ ಗಂಟೆಗೆ 40 ರಿಂದ 50 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಂತರದ ಎರಡು ದಿನ ಸಾಧಾರಣ ಮಳೆ ಬೀಳುವ ಸಾಧ್ಯತೆಯನ್ನು ಅದು ಹೇಳಿದೆ.

45.7ಮ.ಮೀ.ಮಳೆ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಸರಾಸರಿ 45.7ಮಿ.ಮೀ. ಮಳೆಯಾದ ವರದಿ ಬಂದಿದೆ. ಬೈಂದೂರಿನಲ್ಲಿ ಅತ್ಯಧಿಕ 63.6ಮಿ.ಮೀ.ಮಳೆಯಾಗಿದೆ. ಉಳಿದಂತೆ ಹೆಬ್ರಿಯಲಲಿ 60.5, ಕುಂದಾಪುರದಲ್ಲಿ 53.3, ಕಾರ್ಕಳದಲ್ಲಿ 36.9, ಕಾಪುವಿನಲ್ಲಿ 32.9, ಬ್ರಹ್ಮಾವರದಲ್ಲಿ 26.5 ಹಾಗೂ ಉಡುಪಿಯಲ್ಲಿ 24.1ಮಿ.ಮೀ. ಮಳೆಯಾಗಿದೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News