×
Ad

‘ಥ್ರಸ್ಟ್ ಎಂಐಟಿ’ ತಂಡಕ್ಕೆ ಭಾರತದ ಯುವ ಇನ್ನೋವೇಟರ್ಸ್‌’ ಮಾನ್ಯತೆ

Update: 2024-09-24 20:41 IST

ಉಡುಪಿ: ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿದ್ಯಾರ್ಥಿಗಳ ‘ಥ್ರಸ್ಟ್ ಎಂಐಟಿ’ ತಂಡ ವನ್ನು ಮೈ ಗೌ ಇಂಡಿಯಾ ನಡೆಸಿದ ಸ್ಪೇಸ್‌ಪೋರ್ಟ್ ಅಮೆರಿಕಾ ಕಪ್-2024ರಲ್ಲಿ ಉತ್ತಮ ಪ್ರದರ್ಶನ ನೀಡಿದಕ್ಕಾಗಿ ‘ಭಾರತದ ಯಂಗ್ ಇನ್ನೋವೇಟರ್ಸ್‌’ ಗಳಾಗಿ ಮಾನ್ಯತೆ ನೀಡಲಾಗಿದೆ.

‘ದಿ ಸ್ಪೇಸ್‌ಪೋರ್ಟ್ ಅಮೆರಿಕ ಕಪ್’ ಎಂಬುದು ರಾಕೆಟ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆಯುವ ಅತ್ಯಂತ ದೊಡ್ಡ ಅಂತರ ಕಾಲೇಜು ಸ್ಪರ್ಧೆಯಾಗಿದೆ. ಜಾಗತಿಕವಾಗಿ ಇಡೀ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಸ್ಪರ್ಧಿಸುತ್ತಾರೆ.

ಇದರಲಿ ರಾಕೆಟ್‌ಗಳ ವಿನ್ಯಾಸ, ನಿರ್ಮಾಣ ಹಾಗೂ ಅವುಗಳ ಉಡಾವಣೆ ಸವಾಲುಗಳಿಗೆ ವಿದ್ಯಾರ್ಥಿಗಳು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಏರೋಸ್ಪೇಸ್ ಕ್ಷೇತ್ರದಲ್ಲಿ ಪ್ರತಿಭಾನ್ವೇಷಣೆಗೆ ನಡೆಯುವ ಬೃಹತ್ ಸ್ಪರ್ಧೆ ಇದಾಗಿದೆ. ಈ ಬಾರಿ ಎಂಐಟಿಯ ಥ್ರಸ್ಟ್ ಎಂಐಟಿ ತಂಡ ತೋರಿದ ಅತ್ಯುತ್ತಮ ಪ್ರದರ್ಶನ ಮೈ ಗೌ ಇಂಡಿಯಾದಿಂದ ರಾಷ್ಟ್ರೀಯ ಮನ್ನಣೆ ಪಡೆಯಲು ಯಶಸ್ವಿಯಾಗಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.

‘ಎಂಐಟಿ ವಿದ್ಯಾರ್ಥಿಗಳು ಹೊಸ ಬಾಹ್ಯಾಕಾಶ ಪರಿಶೋಧನಾ ತಂತ್ರಜ್ಞಾನ ವನ್ನು ಅಭಿವೃದ್ಧಿ ಪಡಿಸುವಲ್ಲಿ ತೋರಿದ ಕಠಿಣ ಪರಿಶ್ರಮ, ಆವಿಷ್ಕಾರ ಹಾಗೂ ಸಮರ್ಪಣಾ ಮನೋಭಾವದ ದ್ಯೋತಕವಾಗಿದೆ. ತಂಡದ ಈ ಸಾಧನೆ ಯಿಂದ ತಮಗೆ ಹೆಮ್ಮೆ ಎನಿಸಿದೆ.’ ಎಂದು ಮಾಹೆಯ ಕುಲಪತಿ ಲೆ.ಜ. ಡಾ.ಎಂ.ಡಿ.ವೆಂಕಟೇಶ್ ನುಡಿದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ನಾರಾಯಣ ಸಭಾಹಿತ್ ಅವರು ಸಹ ತಂಡ ಸಾಧನೆಯನ್ನು ಪ್ರಶಂಸಸಿದ್ದು, ಯುವ ಸಂಶೋಧಕರು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದ್ದಾರೆ.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News