ಅವರಾಲು ಮಟ್ಟು ಪ್ರಕರಣ: ತನಿಖೆಗೆ ಸಂಸದ ಕೋಟ ಆಗ್ರಹ
ಪಡುಬಿದ್ರಿ, ಫೆ.19: ಅವರಾಲು ಮಟ್ಟು ಪ್ರದೇಶದಲ್ಲಿ ರೈಲು ಹಳಿಗಳ ಕಬ್ಬಿಣದ ಲಾಕ್‌ಗಳನ್ನು ಬಾಲಕರು ತೆಗೆದ ಪ್ರಕರಣದ ಕುರಿತು ರಾಜ್ಯ ಸರಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಉಡುಪಿ -ಚಿಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.
ಅವರಾಲುಮಟ್ಟುವಿನ ಪ್ರಕರಣಕ್ಕೆ ಸಂಬಂಧಿಸಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಘಟನೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದರ ಕುರಿತಾಗಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ಸಮಗ್ರ ತನಿಖೆಯಾಗಬೇಕು. ಪ್ರಕರಣಗಳ ಹಿಂದಿನ ಶಕ್ತಿ ಯಾವುದು ಎಂಬುದು ಸೂಕ್ತ ತನಿಖೆಯ ಮೂಲಕವೇ ಹೊರ ಬರಬೇಕು ಎಂದರು.
ಗ್ಯಾಂಗ್‌ಮೆನ್ ವಿರುದ್ಧವಾಗಿ ದಾಖಲಾದ ಪ್ರಕರಣವನ್ನು ಪರಿಶೀಲನೆ ಗೊಳಪಡಿಸಿ ಆತ ನಿರಪರಾಧಿಯಾಗಿದ್ದರೆ, ಆತನ ವಿರುದ್ಧದ ಪ್ರಕರಣಗಳನ್ನು ವಾಪಾಸು ಪಡೆಯಬೇಕು. ಬಾಲಕರನ್ನು ದಂಡ ವಿಧಿಸಿ ಬಿಡಲಾಗಿದೆ ಎಂದು ಅವರು ತಿಳಿಸಿದರು.
ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ಮತ್ತು ಶರಣ್ ಕುಮಾರ್ ಮಟ್ಟು, ಮಂಡಲ ಬಿಜೆಪಿ ವಕ್ತಾರ ನವೀನ್ ಎಸ್.ಕೆ., ರಂಜನ್ ಕೋಟ್ಯಾನ್ ಹರ್ಷಿತ್ ಪೂಜಾರಿ ಆರ್‌ಸಿಎಫ್ ನಿರೀಕ್ಷಕ ಮಧುಸೂದನ್ ಉಪಸ್ಥಿತರಿದ್ದರು.