×
Ad

ಪೋಪ್ ಶಾಂತಿ-ಪ್ರೀತಿ, ಭರವಸೆಯ ದಾರಿದೀಪ: ಬಿಷಪ್ ಜೆರಾಲ್ಡ್

Update: 2025-04-25 21:00 IST

ಉಡುಪಿ, ಎ.25: ಪೋಪ್ ಫ್ರಾನ್ಸಿಸ್ ದ್ವೇಷ, ಯುದ್ಧ, ವಿಭಜನೆಯಿಂದ ಮೋಡ ಕವಿದಿರುವ ಜಗತ್ತಿನಲ್ಲಿ ಶಾಂತಿ-ಪ್ರೀತಿಯ, ಭರವಸೆಯ ದಾರಿದೀಪ ವಾಗುವುದರೊಂದಿಗೆ. ಕರುಣೆ, ದಯೆಯೇ ಧರ್ಮಸಭೆಯ ಅತ್ಯಂತ ಶ್ರೇಷ್ಟ ಬಡಿತ ಎಂದು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಇತ್ತೀಚೆಗೆ ಅಗಲಿದ ಕಥೊಲಿಕ ಕ್ರೈಸ್ತ ಸಮುದಾಯದ ಪರಮಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಉಡುಪಿ ಕಥೊಲಿಕ ಧರ್ಮ ಪ್ರಾಂತ್ಯದ ನೇತೃತ್ವದಲ್ಲಿ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಕೈಸ್ತ ಐಕ್ಯತಾ ಒಕ್ಕೂಟ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸ ಲಾದ ಸರ್ವ ಧರ್ಮ ಶೃದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಪೋಪ್ ಫ್ರಾನ್ಸಿಸ್ ಅವರು ನಮ್ರತೆ, ಸಹಾನುಭೂತಿ ಮತ್ತು ಸುವಾರ್ತೆಗೆ ಅಚಲವಾದ ಬದ್ಧತೆಯೊಂದಿಗೆ ಮುನ್ನಡೆಸಿದರು. ಸತ್ಯ ಮತ್ತು ಧರ್ಮದ ಮಾರ್ಗಗಳನ್ನು ಅನುಸರಿಸಿ, ನಿಷ್ಟೆ, ಧೈರ್ಯ ಹಾಗೂ ಸಾರ್ವ ತ್ರಿಕ ಪ್ರೀತಿಯಿಂದ, ವಿಶೇಷವಾಗಿ ಬಡವರು, ನಿರ್ಗತಿಕರು, ಗಡಿ ಅಂಚಿನಲಿಲ್ಲಿ ನೆರವಿನ ಅಗತ್ಯ ವಿರುವ ಜನರಿಗಾಗಿ ಬದುಕಿದರು ಮತ್ತು ನಮಗೂ ಅದೇ ರೀತಿ ಮುಂದುವರಿ ಯುವಂತೆ ಸ್ಪೂರ್ತಿ ನೀಡಿದರು. ಅವರ ಅಧಿಕಾರವು ಶಾಂತಿ, ನ್ಯಾಯ, ಬಡವರ ಬಗ್ಗೆ ಕಾಳಜಿ ಮತ್ತು ಸೃಷ್ಟಿಯ ಮೇಲಿನ ಪ್ರೀತಿ, ದಣಿವರಿಯದ ಅನ್ವೇಷಣೆಯಿಂದ ಗುರುತಿಸಲ್ಪಟ್ಟಿತ್ತು ಎಂದರು.

ಪ್ರೀತಿ, ಶಾಂತಿ, ಸೌಹಾರ್ದತೆಯ ಮೂಲಕ ಧಾರ್ಮಿಕ ಸಾಮಾರಸ್ಯ ಮತ್ತು ಜಾಗತಿಕ ಶಾಂತಿಗೆ ಹೆಚ್ಚು ಒತ್ತು ನೀಡಿದ್ದಲ್ಲದೆ ವಿಶ್ವದ ಎಲ್ಲಾ ಮಾನವೀಯ ಬಂಧುತ್ವದ ಸಂಕಲ್ಪವನ್ನು ಪುನರುಜ್ಜೀವಿತಗೊಳಿಸಿ, ಅನ್ಯಾಯ, ಆರ್ಥಿಕ ಅಸಮತೋಲನವನ್ನು ಖಂಡಿಸಿದರು. ಜಗತ್ತು ಒಂದು ಕುಟುಂಬ, ನಾವೆಲ್ಲರೂ ಸಹೋದರ ಸಹೋದರಿಯರು ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದರು. ಪೋಪ್ ಫ್ರಾನ್ಸಿಸ್ ಅವರ ಬಾಳು ನಮಗೆಲ್ಲರಿಗೂ ವಿಶ್ವಾಸ, ನ್ಯಾಯ ಹಾಗೂ ಶಾಂತಿಯಲ್ಲಿ ಬಾಳಲು ದಾರಿದೀಪವಾಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಪೋಪ್ ಫ್ರಾನ್ಸಿಸ್ ವಿಶ್ವದ ಧರ್ಮದ ಗೋಡೆ ಗಳನ್ನು ಮೀರಿ ಸರ್ವ ಧರ್ಮದ ಪ್ರತೀಕವಾದರು. ದ್ವೇಶ ಅಶಾಂತಿಗೆ ಶಾಂತಿಯ ದೂತರಾಗಿ ಸ್ಪಂದಿಸಿ ದರು. ಬಡವರ ಹೃದಯದಲ್ಲಿ ದೇವರಿದ್ದಾರೆ ಎನ್ನುವುದನ್ನು ತನ್ನ ಕೃತ್ಯದಲ್ಲಿ ತೋರ್ಪಡಿಸುವುದರ ಮೂಲಕ ಜಗತ್ತಿಗೆ ಮಾದರಿಯಾದರು. ಅವರ ಮಾನವೀಯತೆ ಹಾಗೂ ಪ್ರೀತಿಯ ವ್ಯಕ್ತಿತ್ವ ಸಮಾಜದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಸ್ಟೀವನ್ ಡಿಸೋಜ, ವಂ.ಡಾ.ರೋಶನ್ ಡಿಸೋಜ, ವಂ.ವಿಶಾಲ್ ಲೋಬೊ, ವಂ.ಅನಿಲ್ ಡಿಸೋಜ, ವಂ.ರಾಜೇಶ್ ಪಸಾನ್ನಾ, ವಂ.ರೋಮೀಯೋ ಲೂವಿಸ್, ವಂ.ಜೋರ್ಜ್ ಡಿಸೋಜ, ವಂ.ವಿಜಯ್ ಡಿಸೋಜ, ವಂ.ಅಶ್ವಿನ್ ಆರಾನ್ಹಾ, ವಂ.ಅಲ್ಫೋನ್ಸಸ್ ಡಿಲೀಮಾ, ವಿವಿಧ ಕ್ರೈಸ್ತ ಸಭೆಗಳಾದ ಸಿರೀಯನ್, ಸಿಎಸ್‌ಐ ಮತ್ತು ಬಾಸೆಲ್ ಮಿಶನ್ ಧರ್ಮಗುರುಗಳು, ಸಭಾ ಪಾಲಕರು ಉಪಸ್ಥಿತರಿದ್ದರು.

ಉಡುಪಿ ವಲಯ ಪ್ರಧಾನ ಧರ್ಮಗುರು ಹಾಗೂ ಶೋಕಮಾತಾ ಚರ್ಚಿನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಸ್ವಾಗತಿಸಿದರು. ಸಹಾಯಕ ಧರ್ಮಗುರು ವಂ.ಲಿಯೋ ಪ್ರವೀಣ್ ಡಿಸೋಜ ವಂದಿಸಿದರು. ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News