×
Ad

ಉಡುಪಿ: ಉಗ್ರರ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2025-04-25 21:06 IST

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಹಾಗೂ ಈ ದುರ್ಘಟನೆಯಲ್ಲಿ ಬಲಿಯಾದವರಿಗೆ ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಶುಕ್ರವಾರ ಮೇಣದ ಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಇದೊಂದು ಹೇಯ ಕೃತ್ಯ. ಇಡೀ ದೇಶವೇ ನೋವಿನಲ್ಲಿ ಮುಳುಗಿದೆ. ಭಯೋತ್ಪಾದಕರಿಗೆ ಜಾತಿ, ಧರ್ಮ ಎಂಬುದು ಇಲ್ಲ. ಈ ಕೃತ್ಯ ವನ್ನು ಇಡೀ ದೇಶದ ಎಲ್ಲ ವರ್ಗದ ಜನರು ಒಕ್ಕೋರಲಿನಿಂದ ಖಂಡಿಸಿದ್ದಾರೆ. ಭಯೋತ್ಪಾದನೆ ಧಮನ ಮಾಡಲು ಕೇಂದ್ರ ಸರಕಾರ ಎಲ್ಲ ರೀತಿಯ ಸಹಕಾರ ವನ್ನು ಕಾಂಗ್ರೆಸ್ ನೀಡುತ್ತಿದೆ. ಇದಕ್ಕೆ ಸರಿಯಾದ ಪ್ರತ್ಯುತ್ತರವನ್ನು ಸರಕಾರ ನೀಡ ಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್‌ ರಾಜ್ ಕಾಂಚನ್ ಮಾತನಾಡಿ, ದ್ವೇಷದ ಆಡಳಿತದಿಂದ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಇಲ್ಲ. ಪ್ರೀತಿಯ ಆಡಳಿತದಿಂದ ಮಾತ್ರ ಈ ದೇಶ ಪ್ರಗತಿ ಕಾಣಲು ಸಾಧ್ಯ. ಈ ದುರ್ಘಟನೆ ಯಿಂದ ಭಾರತೀಯರೇ ಈ ದೇಶದಲ್ಲಿ ಭಯದಲ್ಲಿ ಬದುಕುವ ವಾತಾವಣ ನಿರ್ಮಾಣ ವಾಗಿದೆ. ಕಾಶ್ಮೀರದಿಂದ ಆರ್ಟಿಕಲ್ 370 ರದ್ದು ಮಾಡಿದರೂ ಇನ್ನೂ ಶಾಂತಿ ನೆಲೆಸಿಲ್ಲ. ಭಯೋತ್ಪಾದನೆ ವಿಚಾರದಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಮಮತಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಜ್ಜನ್ ಶೆಟ್ಟಿ, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ನಾಗೇಶ್ ಕುಮಾರ್ ಉದ್ಯಾವರ, ಜ್ಯೋತಿ ಹೆಬ್ಬಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News