ಕಿಡಿಗೇಡಿಗಳಿಂದ ಮಾಣಿಕೊಳಲು ಖಬರಸ್ತಾನದ ನಾಮಫಲಕ ಧ್ವಂಸ
Update: 2025-05-07 21:15 IST
ಗಂಗೊಳ್ಳಿ, ಮೇ 7: ಹಕ್ಲಾಡಿ ಗ್ರಾಮದ ಮಾಣಿಕೊಳಲು ಬದ್ರಿಯ ಜುಮ್ಮ ಮಸೀದಿಗೆ ಸಂಬಂಧಿಸಿದ ಖಬರ್‌ಸ್ಥಾನದಲ್ಲಿನ ಸಮಾಧಿಗಳಿಗೆ ಅಳವಡಿಸಿದ ಗ್ರಾನೈಟ್ ಕಲ್ಲಿನ ನಾಮಫಲಕಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಮೇ 5ರಂದು ರಾತ್ರಿ ವೇಳೆ ನಡೆದಿದೆ.
ಮಸೀದಿಯಿಂದ ಸುಮಾರು 500 ಮೀಟರ್ ದೂರದಲ್ಲಿ ಕಟ್ಟಿನಮಕ್ಕಿ ನೂಜಾಡಿಯ ಸಂಪರ್ಕ ರಸ್ತೆಯ ಬದಿಯಲ್ಲಿರುವ ಖಬರಸ್ತಾನದಲ್ಲಿ ಸುಮಾರು 23 ಸಮಾಧಿಗಳಿದ್ದು, ಇವುಗಳಿಗೆ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ ನಾಮಫಲಕ ಅಳವಡಿಸಲಾಗಿದೆ. ಇಲ್ಲಿಗೆ ಅಕ್ರಮ ಪ್ರವೇಶ ಮಾಡಿದ ಕಿಡಿಗೇಡಿಗಳು ಸುಮಾರು 8 ಸಮಾಧಿಗಳಿಗೆ ಅಳವಡಿಸಿದ ಗ್ರಾನೈಟ್ ಕಲ್ಲಿನ ನಾಮಫಲಕ ಗಳನ್ನು ಧ್ವಂಸ ಮಾಡಿರುವುದಾಗಿ ದೂರಲಾಗಿದೆ. ಇದರಿಂದ 12500ರೂ. ನಷ್ಟ ಉಂಟಾಗಿದೆ ಎಂದು ಮಸೀದಿ ಅಧ್ಯಕ್ಷ ಎಂ.ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.