×
Ad

ಭರದಿಂದ ಸಾಗುತ್ತಿರುವ ಅಂಡರ್‌ಪಾಸ್ ಕಾಮಗಾರಿ: ಅಂಬಲಪಾಡಿ ಜಂಕ್ಷನ್ ಮೇಲ್ಸೆತುವೆಗಾಗಿ ಗರ್ಡರ್ ಅಳವಡಿಕೆ

Update: 2025-05-07 21:25 IST

ಉಡುಪಿ, ಮೇ 7: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನೊಂದಿಗೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ಬುಧವಾರ ಮೇಲ್ಸೆತುವೆಗಾಗಿ ಗರ್ಡರ್ ಅಳವಡಿಸುವ ಕಾರ್ಯ ನಡೆಯಿತು.

ಸುಮಾರು 23.53ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಅಂಬಲಪಾಡಿ ಜಂಕ್ಷನ್ ಕಾಮಗಾರಿಯ ಗುತ್ತಿಗೆಯನ್ನು ಕರ್ಲಾ ಕನ್ಸ್‌ಸ್ಟ್ರಕ್ಷನ್ ವಹಿಸಿಕೊಂಡಿದ್ದು, ಕಳೆದ ಡಿ.16ರಂದು ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಇದೀಗ ಸಿದ್ದಪಡಿಸಿದ್ದ 20 ಗರ್ಡರ್‌ಗಳನ್ನು ನಾಲ್ಕು ಕ್ರೇನ್‌ಗಳ ಮೂಲಕ ಪಿಲ್ಲರ್‌ಗಳ ಮೇಲೆ ಕೂರಿಸಲಾ ಗುತ್ತಿದೆ. ಇದರ ಮೇಲ್ಬಾಗದಲ್ಲಿ ಕಾಂಕ್ರೀಟ್ ಸ್ಲಾಬ್‌ನ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತದೆ. ಬ್ರಹ್ಮಗಿರಿಯಿಂದ ಅಂಬಲಪಾಡಿಗೆ ತೆರಳುವವರಿಗೆ ಈ ತಿಂಗಳ ಕೊನೆಗೆ ಮೇಲ್ಸೆತುವೆ ಕೆಳಭಾಗದಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸದ್ಯ ಈ ಕಾಮಗಾರಿ ನಡೆಯುತ್ತಿರುವುದರಿಂದ ಬ್ರಹ್ಮಗಿರಿಯಿಂದ ಅಂಬಲಪಾಡಿಗೆ ತೆರಳುವವರು ಕಿನ್ನಿ ಮುಲ್ಕಿ ಸ್ವಾಗತ ಗೋಪುರದ ಮೂಲಕ ಹಾಗೂ ಅಂಬಲಪಾಡಿಯಿಂದ ಉಡುಪಿಗೆ ಬರುವವರು ಕರಾವಳಿ ಬೈಪಾಸ್ ಮೂಲಕ ಸುತ್ತಿ ಬಳಸಿ ತೆರಳುತ್ತಿದ್ದಾರೆ.

ಅಂಬಲಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನೊಂದಿಗೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿಯನ್ನು 2026ರ ಮೇ ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸುಮಾರು 1.2 ಕಿ.ಮೀ. ಉದ್ದದ ಹಾಗೂ ಸುಮಾರು 22 ಮೀಟರ್ ಅಗಲದ ಈ ಮೇಲ್ಸೇತುವೆಯಲ್ಲಿ ಆರು ಲೇನ್‌ಗಳಿರುತ್ತವೆ. ಅದೇ ರೀತಿ ಬ್ರಹ್ಮಗಿರಿ- ಕಡೆಕಾರ್ ಸಂಪರ್ಕಿಸುವ ರಸ್ತೆಯ ಅಂಡರ್‌ಪಾಸ್ ಮಧ್ಯೆ ಪಿಲ್ಲರ್ ಬರಲಿದ್ದು, ತಲಾ 15 ಮೀಟರ್ ಅಗಲದ ಒಟ್ಟು 30 ಮೀಟರ್ ಅಗಲದ ರಸ್ತೆ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News