×
Ad

‘ಸಮುದ್ರದಲ್ಲಿ ಅನುಮಾನಾಸ್ಪದ ಬೋಟು, ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡಿ’

Update: 2025-05-10 17:43 IST

ಉಡುಪಿ, ಮೇ 10: ಮೀನುಗಾರರು ಸಮುದ್ರದಲ್ಲಿ ಅನುಮಾನಾಸ್ಪದ ಬೋಟುಗಳ ಚಲನವಲನ ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು ಮತ್ತು ತಕ್ಷಣ ಈ ಕುರಿತು ರಕ್ಷಣಾ ಸಿಬ್ಬಂದಿಗಳಿಗೆ (ಭಾರತೀಯ ನೌಕಪಡೆ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್) ಮಾಹಿತಿ ನೀಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್. ತಿಳಿಸಿದ್ದಾರೆ.

ಸಮುದ್ರದಲ್ಲಿರುವ ನಡುಗುಡ್ಡೆಗಳ ಮೇಲೆ ಜನರು ಕಾಣಿಸಿಕೊಂಡಲ್ಲಿ ತಕ್ಷಣ ಮಾಹಿತಿ ನೀಡಬೇಕು. ಇಲಾಖೆಯಿಂದ ಅಳವಡಿಸಿದ ಟ್ರಾನ್ಸ್‌ಪಂಡರ್‌ಗಳನ್ನು ಚಾಲನೆಯಲ್ಲಿ ಇಟ್ಟುಕೊಳ್ಳಬೇಕು ಹಾಗೂ ನಭಮಿತ್ರ ಆ್ಯಪ್ ಮುಖಾಂತರ ಮಾಹಿತಿ ನೀಡಬೇಕು. ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಸಮುದ್ರದಲ್ಲಿ 2-3 ಬೋಟುಗಳು ಗುಂಪಿನಲ್ಲಿ ಮೀನುಗಾರಿಕೆ ಮಾಡುವುದು ಸೂಕ್ತವಾಗಿದೆ.

ರಾತ್ರಿ ವೇಳೆ ಮೀನುಗಾರಿಕೆ ಮಾಡುವಾಗ ಅಥವಾ ಲಂಗರು ಹಾಕಿರುವಾಗ ನೆವಿಗೇಷನಲ್ ಲೈಟ್ಸ್ ಅನ್ನು ಆನ್ ಮಾಡಿಕೊಳ್ಳಬೇಕು. ರಕ್ಷಣಾ ಪಡೆಯವರು ತಪಾಸಣೆ ಮಾಡಿಡುವಾಗ ಸಹಕರಿಸಬೇಕು ಹಾಗೂ ಎಲ್ಲರು ಕ್ಯೂಆರ್ ಕೋಡೆಡ್ ಆಧಾರ್ ಕಾರ್ಡ್, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಿಗೆ ಮತ್ತು ಇನ್ನಿತರ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಸಂದಿಗ್ದ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ತೆರಳದಿರುವುದು ಸೂಕ್ತ ಎಂದು ಅವರು ಮೀನುಗಾರರಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News