×
Ad

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕರಾವಳಿ ಬೈಪಾಸ್-ಆದಿಉಡುಪಿವರೆಗಿನ ಕಟ್ಟಡಗಳ ತೆರವು

Update: 2025-05-10 21:25 IST

ಉಡುಪಿ: ಕರಾವಳಿ ಜಂಕ್ಷನ್‌ನಿಂದ ಮಲ್ಪೆ ವರೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇಕ್ಕೆಲಗಳ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾ ಚರಣೆ ಆರಂಭಗೊಂಡಿದೆ.

ಕರಾವಳಿ ಬೈಪಾಸ್‌ನಿಂದ ಆದಿಉಡುಪಿ ಪ್ರೌಢಶಾಲೆಯವರೆಗಿನ ಎರಡು ಬದಿಗಳಲ್ಲಿನ ಅಂಗಡಿ ಮುಗ್ಗಟ್ಟು, ಹೊಟೇಲ್ ಸೇರಿದಂತೆ ವಿವಿಧ ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಮೇ 10 ಮತ್ತು 11 ರಂದು ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ಏಕಮುಖ ಸಂಚಾರ ವ್ಯವಸ್ಥೆ ಯನ್ನು ಮಾಡಲಾಗಿದೆ.

ಅದರಂತೆ ಮಲ್ಪೆ ಬಂದರು, ಮಲ್ಪೆಬೀಚ್‌ನಿಂದ ಉಡುಪಿ ಕಡೆಗೆ ಹೋಗುವ ಮೀನು ತುಂಬಿರುವ ವಾಹನ, ಭಾರಿ ಗಾತ್ರದ ವಾಹನ, ಲಘು ವಾಹನ ಹಾಗೂ ಪ್ರವಾಸಿಗರು ಮಲ್ಪೆಜಂಕ್ಷನ್‌ನಿಂದ ಸಿಟಿಜನ್ ಸರ್ಕಲ್ ಮಾರ್ಗವಾಗಿ ಕೊಡವೂರು -ಆಶೀರ್ವಾದ ನಗರ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಸಂಚರಿಸುತ್ತಿದ್ದವು.

ದ್ವಿಚಕ್ರ ವಾಹನ ಮತ್ತು ಲಘು ವಾಹನಗಳು ಮಲ್ಪೆ ಜಂಕ್ಷನ್‌ನಿಂದ ಕಲ್ಮಾಡಿ ಜಂಕ್ಷನ್, ಕಿದಿಯೂರು, ಕಡೆಕಾರ್‌ನಿಂದ ಕನ್ನರ್‌ಪಾಡಿ ದೇವಸ್ಥಾನ ಮಾರ್ಗವಾಗಿ ಉಡುಪಿ ಕಡೆಗೆ ಸಂಚರಿಸಲು ಸೂಚಿಸಿದರೂ ಕೆಲವು ವಾಹನಗಳು ಆದಿಉಡುಪಿ ಮಾರ್ಗವಾಗಿಯೇ ಸಾಗುತ್ತಿರುವುದು ಕಂಡುಬಂತು. ಇದರಿಂದ ಕರಾವಳಿ ಬೈಪಾಸ್‌ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ವಾಹನ ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಹರಸಾಹಸ ಪಡುವಂತಾಯಿತು.

ಈಗಾಗಲೇ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ಎರಡು ಬದಿಗಳಲ್ಲಿರುವ 190 ಕಟ್ಟಡಗಳನ್ನು ಗುರುತಿ ಸಲಾಗಿದ್ದು, ಇದೀಗ ಕರಾವಳಿ ಬೈಪಾಸ್‌ನಿಂದ ಆದಿಉಡುಪಿವರೆಗಿನ ಕಟ್ಟಡಗಳನ್ನು ತೆರವು ಗೊಳಿಸಲಾಗುತ್ತಿದೆ. ಕೆಲವು ಮಾಲಕರು ತೀರಾ ಕಡಿಮೆಯಾಗಿರುವ ಪರಿಹಾರ ಧನವನ್ನು ಪಡೆಯಲು ನಿರಾಕರಿಸಿರುವುದರಿಂದ ಕಟ್ಟಡ ತೆರವಿಗೆ ಅಡ್ಡಿಯಾಗಿತ್ತು. ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ ಈಗ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News