ಭಾರತೀಯ ಸೇನೆ ಹೆಸರಿನಲ್ಲಿ ಉಡುಪಿ ಧರ್ಮಪ್ರಾಂತ್ಯದ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ
ಉಡುಪಿ, ಮೇ 11: ಭಾರತೀಯ ಕಥೊಲಿಕ ಧರ್ಮಾಧ್ಯಕ್ಷರ ಮಂಡಳಿಯ ಸೂಚನೆಯ ಮೇರೆಗೆ ಉಡುಪಿ ಧರ್ಮಪ್ರಾಂತ್ಯದ ಚರ್ಚುಗಳಲ್ಲಿ ರವಿವಾರ ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಒಳಿತಾಗುವಂತೆ ಆಶಿಸಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಪ್ರತಿಯೊಂದು ಚರ್ಚುಗಳಲ್ಲಿ ರವಿವಾರದ ಬಲಿಪೂಜೆಯ ವೇಳೆ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕ ರಿಗೆ ಒಳಿತಾಗುವಂತೆ ಕೋರಿ ವಿಶೇಷ ಪರಮ ಪ್ರಸಾದದ ಆರಾಧನೆಯ ಮೂಲಕ ಧರ್ಮಗುರುಗಳು ಪ್ರಾರ್ಥನೆಯನ್ನು ಸಲ್ಲಿಸಿದರು. ತಮ್ಮ ಅಧಿಕೃತ ವಾರ್ಷಿಕ ಭೇಟಿಯಲ್ಲಿರುವ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಕಾರ್ಕಳ ತಾಲೂಕಿನ ಬೆಳ್ಮಣ್ ಸಂತ ಜೋಸೆಫರ ಚರ್ಚಿನಲ್ಲಿ ವಿಶೇಷ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ದೇಶ ಕಾಯುವ ಸೈನಿಕರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಇದೇ ವೇಳೆ ಕ್ರೈಸ್ತ ಧರ್ಮಸಭೆಗೆ ನೂತನ ಜಗದ್ಗುರುವಾಗಿ ಆಯ್ಕೆಯಾಗಿರುವ ಪೋಪ್ 14ನೇ ಲಿಯೋ ಅವರಿಗೆ ಶುಭಕೋರಿ ವಿಶೇಷ ಆರಾಧನೆಯನ್ನು ಸಲ್ಲಿಸಿದರು. ಬಳಿಕ ಮಾತನಾಡಿದ ಧರ್ಮಾಧ್ಯಕ್ಷರು, ಇಂದು ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯ ಯೇಸು ಒಳ್ಳೆಯ ಕುರುಬರ ಹಬ್ಬದ ಆಚರಣೆಯನ್ನು ಮಾಡುತ್ತಿದ್ದು ಇದೇ ಸಂದರ್ಭದಲ್ಲಿ ಜಗತ್ತಿಗೆ ಮುಗ್ದ ಮನಸ್ಸಿನ ಶಾಂತಿ ದೂತರಾಗಿ ಜಗದ್ಗುರು ಪೋಪ್ 14 ನೇ ಲಿಯೋ ಆಯ್ಕೆಯಾಗಿದ್ದಾರೆ. ದೇಶದ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ಭೀತಿ ಆವರಿಸಿದ್ದು ನಮ್ಮ ಸೈನಿಕರು ತಮ್ಮ ಜೀವದ ಹಂಗು ತೊರೆದು ತಮ್ಮ ದೇಶದ ಪ್ರಜೆಗಳ ರಕ್ಷಣೆಗೆ ಕಟಿಬದ್ದರಾಗಿ ನಿಂತಿದ್ದಾರೆ. ಅವರಿಗಾಗಿ ನಮ್ಮ ಪ್ರಾರ್ಥನೆ ಅನುದಿನವೂ ಇರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ವಂ.ಫ್ರೆಡ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ.ಅರ್ನಾಲ್ಡ್ ಮಥಾಯಸ್, ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚಿನ ಧರ್ಮಗುರು ವಂ|ಕ್ಲೇಮಂಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ತೊಟ್ಟಂ ಚರ್ಚಿನಲ್ಲಿ ವಿಶೇಷ ಪ್ರಾರ್ಥನೆ
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಒಳಿತಾಗುವಂತೆ ಕೋರಿ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ರವಿವಾರ ಬಲಿಪೂಜೆಯ ವೇಳೆ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಒಳಿತಾಗುವಂತೆ ಕೋರಿ ವಿಶೇಷ ಪರಮ ಪ್ರಸಾದದ ಆರಾಧನೆಯ ಮೂಲಕ ಧರ್ಮಗುರುಗಳು ಪ್ರಾರ್ಥನೆಯನ್ನು ಸಲ್ಲಿಸಿದರು. ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, ಭಾರತ ದೇಶ ವಿವಿಧ ಧರ್ಮ, ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳ ಸುಂದರ ದೇಶವಾಗಿದೆ. ಭಾರತೀಯರಾಗಿ ದೇಶದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಅತಿಥಿ ಧರ್ಮಗುರು ವಂ.ಕ್ಲೇಮಂಟ್ ಡಿಸೋಜ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಶ್ಮಾ ಮೊದಲಾದವರು ಉಪಸ್ಥಿತರಿದ್ದರು.