×
Ad

ಬೌದ್ಧ ಧರ್ಮಕ್ಕೆ ಬ್ರಾಹ್ಮಣ್ಯದಿಂದ ಅಪಾಯ: ಜಯನ್ ಮಲ್ಪೆ

Update: 2025-05-12 17:09 IST

ಮಲ್ಪೆ : ಬೌದ್ಧ ಧರ್ಮಕ್ಕೆ ಬ್ರಾಹ್ಮಣ್ಯ ಧರ್ಮದಿಂದ ಅಪಾಯ ಇದೆಯೇ ಹೊರತು ಇಸ್ಲಾಮ್ ಧರ್ಮ ದಿಂದಲ್ಲ. ಬ್ರಾಹ್ಮಣ್ಯ ಧರ್ಮ ಸಮಾಜದ ಶ್ರೇಣೀಕೃತ ಅಸಮಾನತೆ ಹಾಗೇ ಇರಲೆಂದೇ ಬಯಸುತ್ತದೆ. ಬೌದ್ಧ ಧರ್ಮ ಸಮಾನತೆಯನ್ನು ನಂಬುತ್ತದೆ. ಅದಕ್ಕಾಗಿ ಬೌದ್ಧ ಧರ್ಮವನ್ನು ದ್ವೇಷಿಸುತ್ತಾರೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ 2569ನೇ ವೈಶಾಖ ಪೂರ್ಣಿಮೆಯ ಬುದ್ಧ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದು ಭಾರತ ಮತ್ತು ಪಾಕಿಸ್ಥಾನದ ನಡುವೆ ದಾಳಿ ನಡೆಯುತ್ತಿದೆ. ನಮಗೆ ಮಾನವ ಜನಾಂಗದ ಎದುರಿಗೆ ಇರುವ ಬುದ್ಧ ಮತ್ತು ಯುದ್ಧ ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾದ ಅನಿವಾರ‌್ಯತೆ ಎದುರಾದರೆ, ಜೀವ ಜಗತ್ತಿನ ಬಗ್ಗೆ ಕಿಂಚಿತ್ತಾದರೂ ಪ್ರೀತಿಯುಳ್ಳ ಮನುಷ್ಯ ವರ್ಗವು ಬುದ್ಧನನ್ನು ಮತ್ತು ಬುದ್ದನ ವಿಚಾರಗಳನ್ನು ಅಪ್ಪಿಕೊಳ್ಳದೇ ಬೇರೆ ದಾರಿ ಕಾಣುವುದಿಲ್ಲ. ಬುದ್ದನ ಶಾಂತಿ ಮಂತ್ರವೇ ಭೂಮಿಯ ಮೇಲಿನ ಜೀವಸಂಕುಲದ ಉಳಿವಿಗೆ ರಕ್ಷಾಕ ವಚವಾಗಬಲ್ಲದು ಎಂದರು.

ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಸಮಕಾಲೀನ ಜಾಗತಿಕ ಘಟನೆಗಳಿಗೆ, ಹಿಂಸೆಯ ಪ್ರಚೋದನೆ, ಭಯೋತ್ಪಾದನೆ, ಭ್ರಷ್ಟಾಚಾರ, ಅನೈತಿಕ ರಾಜಕಾರಣ, ಕೋಮುದ್ವೇಷ ಮುಂತಾದವುಗಳಿಗೆ ಪ್ರತಿರೋಧವೊಡ್ಡಲು ಬುದ್ಧನನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳ ಬೇಕಾಗಿದೆ ಎಂದು ಹೇಳಿದರು.

ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ಭವಿಷ್ಯದಲ್ಲಿ ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ಸಕಾರಗೊಳ್ಳ ಬೇಕಾದರೆ ದಲಿತರು ಅಂಬೇಡ್ಕರ್‌ರವರನ್ನು ತಮ್ಮ ಸಂಕುಚಿತ ಸ್ವಾರ್ಥಕ್ಕೆ ಸಾಧನವಾಗಿ ಬಳಸುವುದನ್ನು ಬಿಟ್ಟು ಧಮ್ಮ ಚಳವಳಿಯನ್ನು ಮುನ್ನಡೆಸಬೇಕಾಗಿದೆ ಎಂದು ತಿಳಿಸಿದರು.

ಹಿರಿಯ ದಲಿತ ಮುಖಂಡರಾದ ದಯಾಕರ ಮಲ್ಪೆ, ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಗುಣವಂತ ತೊಟ್ಟಂ, ದೀಪಕ್ ಕೊಡವೂರು, ಸತೀಶ್ ಕಪ್ಪೆಟ್ಟು, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಅರುಣ್ ಸಲ್ಯಾನ್, ನವೀನ್ ಬನ್ನಂಜೆ, ಸಕಿ ಕುಮಾರ್ ಕಪ್ಪೆಟ್ಟು, ಮಾಸ್ಟರ್ ಹಷೀಲ್ ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಮಲ್ಪೆಸುತ್ತಮುತ್ತಲಿನ ದಲಿತ ಕಾಲೋನಿಯ ನೂರಾರು ಮಂದಿ ಗೌತಮಬುದ್ಧನಿಗೆ ಹೂವು ಗುಚ್ಚ ಅರ್ಪಿಸಿ ವಂದನೆ ಸಲ್ಲಿಸಿದರು. ವಿನಯ ಕೊಡಂಕೂರು ಸ್ವಾಗತಿಸಿದರು. ಸಂತೋಷ್ ಮೂಡುಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News