ಉಡುಪಿ ಸಂಜೀವಿನಿ ಬ್ರಾಂಡ್ ಉತ್ಪನ್ನ ಮಾರುಕಟ್ಟೆಗೆ
ಉಡುಪಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ‘ಸಂಜೀವಿನಿ’, ಜಿಲ್ಲಾ ಪಂಚಾಯತ್ ಉಡುಪಿ ಇದರ ಮೂಲಕ ಸಂಜೀವಿನಿ ಗುಂಪಿನ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ‘ಉಡುಪಿ ಸಂಜೀವಿನಿ’ ಬ್ರಾಂಡ್ ಹೆಸರಿನ ಉತ್ಪನ್ನಗಳನ್ನು ಇಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಿಪಂನ ಡಾ. ವಿ.ಎಸ್.ಆಚಾರ್ಯ ಸಭಾಂಗಣ ದಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಸಂಜೀವಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಜಿಲ್ಲೆಯ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸುವ ವಿವಿಧ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ದೊರಕುವಂತಾಗಬೇಕು. ಮೊದಲ ಹಂತದಲ್ಲಿ ಆಯ್ದ 25ರಿಂದ 30 ಉತ್ಪನ್ನಗಳನ್ನು ಮಾತ್ರ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಎಲ್ಲಾ ಉತ್ಪನ್ನಗಳನ್ನು ಉಡುಪಿ ಸಂಜೀವಿನಿ ಬ್ರಾಂಡ್ ಅಡಿಯಲ್ಲಿ ತರಲಾಗುವುದು ಎಂದು ಕೋಟ ಈ ಸಂದರ್ಭದಲ್ಲಿ ನುಡಿದರು.
ಇದೇ ಸಂದರ್ಭದಲ್ಲಿ ಅಮವಾಸೆಬೈಲ್ ಗ್ರಾಮದ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಅಪ್ಪೆ ಮಿಡಿ ಉಪ್ಪಿನಕಾಯಿ ಹಾಗೂ ಹಳ್ಳಿಹೊಳೆ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಕೃತಕ ಆಭರಣಗಳನ್ನು ಬಿಡುಗಡೆ ಮಾಡಲಾಯಿತು.
ಈಗಾಗಲೇ ನಗರಸಭೆ ಹಾಗೂ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಮಾರಾಟ ಮಳಿಗೆಗಳನ್ನು ತೆರೆಯಲು ಜಾಗ ಗುರುತಿಸಲಾಗಿದ್ದು, ಈ ಮಾರಾಟ ಮಳಿಗೆ, ಸೂಪರ್ ಮಾರ್ಕೆಟ್ ಮಾಲ್‌ಗಳ ಮೂಲಕ ಮುಂದುವರಿದು, ಆನ್‌ಲೈನ್ ಮಾರಾಟದ ಮೂಲಕ ಮಾರುಕಟ್ಟೆ ವಿಸ್ತರಣೆಗೆ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಜಿಪಂನ ಶ್ರೀನಿವಾಸ ರಾವ್ ತಿಳಿಸಿದ್ದಾರೆ.