×
Ad

ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ವೆಂಟೆಡ್ ಡ್ಯಾಂ ನಿರ್ಮಿಸಲು ಆಗ್ರಹ: ನಾಡಾ ಗ್ರಾಪಂ ವಿರುದ್ಧ ಅನಿರ್ದಿಷ್ಟಾವಧಿ

Update: 2025-05-14 19:59 IST

ಕುಂದಾಪುರ, ಮೇ 14: ನಿತ್ಯದ ಬಳಕೆಗಾಗಿ ನಳ್ಳಿಯಲ್ಲಿ ಬರುವ ಉಪ್ಪು ನೀರಿಗೂ ಕಟ್ಟಬೇಕಾದ ತೆರಿಗೆಯಲ್ಲಿ ವಿನಾಯಿತಿ ಮತ್ತು ಸೌಪರ್ಣಿಕ ನದಿಗೆ ಕೋಣ್ಕಿ-ಹೇರೂರು ಭಾಗದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸಲು ಹಾಗೂ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್, ಜನವಾದಿ ಮಹಿಳಾ ಸಂಘಟನೆ ನಾಡ ವಲಯದ ನೇತೃತ್ವದಲ್ಲಿ ನಾಡ ಗ್ರಾಪಂ ಕಛೇರಿ ಎದುರು ಇಂದಿನಿಂದ ’ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ’ ಆರಂಭಗೊಂಡಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸ್ವಾತಂತ್ರ್ಯ ಬಂದು ಹಲವು ವರ್ಷ ಕಳೆದಿದ್ದು ಕುಡಿಯುವ ನೀರಿಗೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಾರ್ಚ್ ನಿಂದ ಮೇ ತನಕ ಸಿಹಿ ನೀರಿನ ಬದಲು ಉಪ್ಪು ನೀರು ಕುಡಿಯುವ ದುಸ್ಥಿತಿ ಬಂದಿದ್ದು ಆಡಳಿತ ನಡೆಸುವ ಗ್ರಾಪಂ ಸದಸ್ಯರಿಂದ ಹಿಡಿದು ಜನರಿಂದ ಆಯ್ಕೆಯಾದ ಸಂಸದರು, ಶಾಸಕರು, ಜನಪ್ರತಿನಿಧಿಗಳು ಏನು ಮಾಡಿದ್ದಾರೆ ಎಂಬುದು ಪ್ರಶ್ನೆ ಮಾಡಬೇಕಾಗಿದೆ ಎಂದು ಟೀಕಿಸಿದರು.

2012ರಲ್ಲಿ ನಾಡ ಗ್ರಾಪಂ ವ್ಯಾಪ್ತಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ(ಜಲಜೀವನ್ ಮಿಷನ್) ಸುಮಾರು ಅಂದಾಜು 10 ಕೋಟಿ ರೂ. ಮಂಜೂರು ಮಾಡಿದ್ದು ಅಂದು ನಾಡ ಗ್ರಾಪಂ ಸಾಮಾನ್ಯ ಸಭೆಯ ನಿರ್ಣಯವನ್ನು ತಿರಸ್ಕರಿಸಿ ಅಂದಿನ ಅನುಷ್ಠಾನಾಧಿಕಾರಿಗಳು ಸೌಪರ್ಣಿಕ ನದಿಯಿಂದ ನೀರನ್ನು ನೇರವಾಗಿ ಸಂಗ್ರಹ ಘಟಕದ ಟ್ಯಾಂಕ್‌ಗಳಿಗೆ ಸರಬರಾಜು ಮಾಡಲು ಕ್ರಿಯಾ ಯೋಜನೆ ರೂಪಿಸಿದ್ದರು. ಅನುಷ್ಠಾನ ಅಧಿಕಾರಿಗಳ ಬೇಜವಾಬ್ದಾರಿ ತೀರ್ಮಾನಗಳಿಂದಾಗಿ ನಾಡ ಗ್ರಾಪಂ ವ್ಯಾಪ್ತಿಯ ಜನರು ಮೂರು ತಿಂಗಳಲ್ಲಿ ಉಪ್ಪುನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ದೂರಿದರು.

ಡಿವೈಎಫ್‌ಐ ಕಾರ್ಯದರ್ಶಿ ರಾಜೇಶ್ ಪಡುಕೋಣೆ ಮಾತನಾಡಿ, ಅವಿಭಜಿತ ನಾಡ ಗ್ರಾಪಂ ವ್ಯಾಪ್ತಿಯಲ್ಲಿ ಸೌಪರ್ಣಿಕ ನದಿ ಆವೃತಗೊಂಡಿದೆ. ಈ ನದಿಯಲ್ಲಿ ಮಾರ್ಚ್, ಎಪ್ರಿಲ್, ಮತ್ತು ಮೇ ತಿಂಗಳಲ್ಲಿ ಉಪ್ಪು ನೀರು ಶೇಖರಣೆಗೊಳ್ಳುತ್ತದೆ ಎಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ 2012ರಲ್ಲಿ ಆರಂಭಿಸಲಾಯಿತು ಎಂದರು.

ಅಂದು ಇದಕ್ಕೆ ವೈಜ್ಞಾನಿಕ ಮಾದರಿಯಲ್ಲಿ ಮಾಡಿ ಎಂದು ಕೂಗು ಕೇಳಿಬಂದಿತ್ತು. ಆದರೆ ಆ ಸೂಚನೆ ಕಡೆಗಣಿಸಿ ಅನುಷ್ಠಾನ ಇಲಾಖೆ ಮಾಡಿದ ಕಾಮಗಾರಿಯಿಂದಾಗಿ ನಾಡ, ಹಡವು, ಬಡಾಕೆರೆ, ಸೇನಾಪುರ ಗ್ರಾಮಗಳಿಗೆ ಬೇಸಿಗೆಯಲ್ಲಿ ಉಪ್ಪುನೀರಿನ ಸಮಸ್ಯೆ ತಪ್ಪಿದ್ದಲ್ಲ. ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕೊಡುತ್ತಿ ದ್ದರೂ ಕೂಡ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನೀರು ತರಲು ಕಿಲೋಮೀಟರ್ ನಡೆಯುವ ಅತಂತ್ರ ಪರಿಸ್ಥಿತಿಯಿದೆ. ಶುದ್ಧ ಕುಡಿಯುವ ನೀರು ಮನೆಗಳಿಗೆ ತಲುಪುವವರೆಗೆ ಈ ಹೋರಾಟ ನಿರಂತರ ಎಂದು ಅವರು ಎಚ್ಚರಿಕೆ ನೀಡಿದರು.

ಬೈಂದೂರು ತಹಶಿಲ್ದಾರ್ ಭೀಮಸೇನ ಕುಲಕರ್ಣಿ, ಪ್ರಭಾರ ಇಓ ರಾಜಕುಮಾರ್, ಗ್ರಾಮೀಣ ಶುದ್ಧ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರ ಉದಯಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು ಅವರ ಮೂಲಕ ಧರಣಿನಿರತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್‌ಐ ಮುಖಂಡ ರಾಜೀವ ಪಡುಕೋಣೆ, ಗ್ರಾಪಂ ಸದಸ್ಯೆ ಶೋಭಾ ಕೆರೆಮನೆ, ಡಿವೈಎಫ್‌ಐ ಕುಂದಾಪುರ ತಾಲೂಕು ಕಾರ್ಯದರ್ಶಿ ನಿಸರ್ಗ ಪಡುಕೋಣೆ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ಶೀಲಾವತಿ, ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನ ನಾಡ, ಕೋಶಾಧಿಕಾರಿ ಪಲ್ಲವಿ, ನಾಡ ವಲಯದ ಅಧ್ಯಕ್ಷೆ ಮನೋರಮಾ ಭಂಡಾರಿ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಫಿಲಿಪ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.

ಪ್ರತೀ ವರ್ಷ ನಾಡ ಗ್ರಾಪಂ ಜನರಿಂದ ಸಂಗ್ರಹಿಸುವ ತೆರಿಗೆ ಹಣದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರನ್ನು ಅಸಮರ್ಪಕವಾಗಿ ನೀಡುತ್ತಿದ್ದಾರೆ. ಜನರು ಕುಡಿಯುವ ನೀರಿಗೆ ಪರದಾಡುತ್ತಿರುವ ಪರಿಸ್ಥಿತಿ ಇರುವಾಗ, ಗ್ರಾಪಂನಿಂದ ದಿನನಿತ್ಯದ ಬಳಕೆಗಾಗಿ ನಳ್ಳಿಯಲ್ಲಿ ಬರುವ ಉಪ್ಪುನೀರಿಗೂ ಸಹ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಟ್ಯಾಂಕರ್ ನೀರು ಪೂರೈಸಲು ಅನಾವಶ್ಯಕ ಖರ್ಚು ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಸಂಬಂದಪಟ್ಟವರು ಇಚ್ಚಾಶಕ್ತಿ ತೋರುತ್ತಿಲ್ಲ.

-ಬಾಲಕೃಷ್ಣ ಶೆಟ್ಟಿ, ರಾಜ್ಯಧ್ಯಕ್ಷರು, ಕಟ್ಟಡ ಕಾರ್ಮಿಕರ ಸಂಘ



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News