ಕೊರಗರಿಗೆ ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆ ಆರೋಪ: ಪ್ರತಿಭಟನೆಯ ಎಚ್ಚರಿಕೆ
ಉಡುಪಿ: ರಾಜ್ಯ ಸರಕಾರ ಕಳೆದ ಎರಡು ತಿಂಗಳಿಂದ ಕೊರಗ ಸಮುದಾಯದವರಿಗೆ ಪೂರೈಕೆ ಮಾಡುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟ ತೀರಾ ಕಳಪೆಯಾಗಿದ್ದು, ಈ ಬಗ್ಗೆ ಗಮನಹರಿಸಿ ಗುಣಮಟ್ಟದ ಆಹಾರ ಪೂಕೈರೆ ಮಾಡಬೇಕು. ಇಲ್ಲದಿದ್ದರೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೊರಗ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಪ್ರಿಮಿಟಿವ್ ಟ್ರೈಬ್ ಸಮುದಾಯವಾದ ಕೊರಗರು ರಕ್ತಹೀನತೆ, ಟಿಬಿ, ಅಪೌಷ್ಟಿಕತೆ ಸೇರಿದಂತೆ ಇನ್ನೂ ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಈಗಲೂ ಬಳಲುತಿದ್ದಾರೆ. ಕರಾವಳಿಯಲ್ಲಿ ಕುಸಿಯುತ್ತಿರುವ ಕೊರಗರ ಜನಸಂಖ್ಯೆಯನ್ನು ಮನಗೊಂಡು ಸರಕಾರವು ಅನೇಕ ವರ್ಷಗಳಿಂದ ಕೊರಗ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಪೂರೈಕೆಯನ್ನು ಮಾಡುತ್ತಿವೆ.
ಆದರೆ ಇತ್ತೀಚೆಗೆ ಕಳೆದ ಎರಡು ತಿಂಗಳಿಂದ ಪೂರೈಕೆಯಾಗುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟ ತೀರಾ ಕಳಪೆಯಾಗಿದೆ. ಕೊರಗರಿಗೆ ನೀಡಲಾಗುತ್ತಿರುವ ತುಪ್ಪ, ಎಣ್ಣೆ, ಕಡಲೆ, ತೊಗರಿ ಬೇಳೆ, ಸಕ್ಕರೆ, ಬೆಲ್ಲ, ಹೆಸರುಕಾಳು, ತೊಗರಿ, ಅಕ್ಕಿ, ಪಾಮೋಲಿನ್ ಎಣ್ಣೆ ಮತ್ತು ಮೊಟ್ಟೆ ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳ ಗುಣಮಟ್ಟ ತೀರಾ ಕಳಪೆಯಾಗಿದ್ದು ಅದನ್ನು ಸೇವಿಸಲು ಅಸಾಧ್ಯವಾಗಿದೆ. ಇದರಿಂದ ಕೊರಗರಿಗೆ ಅನೇಕ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಕೊರಗ ಸಂಘಟನೆಗಳು ಆರೋಪಿಸಿವೆ.
ಈ ಕುರಿತು ಸಮಗ್ರ ಬುಡಕಟ್ಟು ಯೋಜನಾ ಇಲಾಖೆಗೆ ಮನವಿ ಸಲ್ಲಿಸಿದ್ದು ಕೊರಗರ ಪ್ರಮುಖ ಬೇಡಿಕೆಗೆ ಯಾವುದೇ ರೀತಿಯಿಂದಲೂ ಸ್ಪಂದಿಸುತ್ತಿಲ್ಲ. ಅಲ್ಲದೇ ಉಡುಪಿ ಜಿಲ್ಲಾಧಿಕಾರಿಯವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದು ಅವರಿಂದಲು ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಕೊರಗ ಸಂಘಟನೆಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಸರಕಾರ ಕೂಡಲೇ ಹಳೆಯ ಟೆಂಡರ್ ರದ್ದುಗೊಳಿಸಿ, ರೀಟೆಂಡರ್ ಕರೆದು ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಸಲು ಗಮನಕೊಡಬೇಕು ಹಾಗೂ ತ್ವರಿತವಾಗಿ ಕೊರಗರ ಗಂಭೀರ ಸಮಸ್ಯೆಗೆ ಸ್ಪಂದಿಸದಿದ್ದರೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯೆದುರು ಕೊರಗ ಸಂಘಗಳ ಒಕ್ಕೂಟದಿಂದ ಪ್ರತಿಭಟನೆಯನ್ನು ನಡೆಸಲಾ ಗುವುದು ಎಂದು ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ಮತ್ತು ಸಂಯೋಜಕ ಪುತ್ರನ್ ಹೆಬ್ರಿ ತಿಳಿಸಿದ್ದಾರೆ.