ಮಳೆನೀರಿನ ತೋಡಿನ ಮೇಲೆ ಅನಧಿಕೃತ ಕಟ್ಟಡ ನಿರ್ಮಾಣ: ಉಡುಪಿ ಪರ್ಯಾಯ ಪುತ್ತಿಗೆ ಮಠಕ್ಕೆ ನಗರಸಭೆಯಿಂದ ನೋಟೀಸ್
ಉಡುಪಿ, ಮೇ 16: ಮಳೆನೀರು ಹರಿಯುವ ತೋಡಿನ ಮೇಲೆ ಅನಧಿಕೃತ ಕಟ್ಟಡ ನಿರ್ಮಿಸುತ್ತಿರುವ ಕುರಿತು ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠಕ್ಕೆ ಉಡುಪಿ ನಗರಸಭೆಯಿಂದ ನೋಟೀಸ್ ಜಾರಿ ಮಾಡಲಾಗಿದೆ.
ಸಾರ್ವಜನಿಕರಿಂದ ಬಂದ ದೂರಿನಂತೆ ಉಡುಪಿ ನಗರಸಭೆ ಪೌರಾಯುಕ್ತರು ಎ.4ರಂದು ಪರ್ಯಾಯ ಪುತ್ತಿಗೆ ಮಠದ ವ್ಯವಸ್ಥಾಪಕರಿಗೆ ಈ ಕುರಿತು ನೋಟೀಸ್ ಜಾರಿಗೊಳಿಸಿದ್ದಾರೆ. ಆದರೆ ಈ ನೋಟೀಸ್‌ಗೆ ಮಠದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ನಗರಸಭೆ ಮೂಲಗಳು ತಿಳಿಸಿವೆ.
ಉಡುಪಿ ಶ್ರೀಕೃಷ್ಣ ಮಠದ ಬಿರ್ಲಾ ಚಾತ್ರ ಹಾಗೂ ಗೀತಾ ಮಂದಿರದ ಬಳಿ ಮಳೆ ನೀರು ಹರಿಯುವ ತೋಡನ್ನು ಅತಿಕ್ರಮಣ ಮಾಡಿ ಪುತ್ತಿಗೆ ಮಠದ ವತಿಯಿಂದ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದರಿಂದ ಮಳೆಗಾಲದಲ್ಲಿ ನೆರೆ ಬರುವ ಸಂಭವ ಇರುವುದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮಳೆ ನೀರು ಚರಂಡಿ ಮೇಲೆ ನಿರ್ಮಿಸುತ್ತಿರುವ ಕಟ್ಟಡವನ್ನು ತೆರವುಗೊಳಿಸುವಂತೆ ನೋಟೀಸ್‌ನಲ್ಲಿ ಸೂಚಿಸಲಾಗಿತ್ತು.
ಅದರಂತೆ ಈ ಬಗ್ಗೆ ನಗರಸಭೆ ಕಿರಿಯ ಅಭಿಯಂತರರು ಸ್ಥಳ ಪರಿಶೀಲಿಸಿ ವರದಿ ನೀಡಿದ್ದಾರೆ. ಈ ಕಾಮಗಾರಿಯು ಅನೃಧಿಕೃತವಾಗಿದ್ದು, ಮಳೆ ನೀರು ಹರಿಯುವ ಚರಂಡಿ ಮೇಲೆ ನಿರ್ಮಿಸುತ್ತಿರುವುದರಿಂದ ಮುಂದೆ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.
ಆದುದರಿಂದ ಈ ನೋಟೀಸು ತಲುಪಿದ ಕೂಡಲೇ ಈ ಅನಧಿಕೃತ ಕಾಮಗಾರಿಯನ್ನು ಸ್ಥಗಿತಗೊಳಿಸಿ ನಗರಸಭೆಯಿಂದ ಪರವಾನಿಗೆ ಪಡೆದು ಕೊಂಡು ಕಾಮಗಾರಿ ಮುಂದುವರೆಸಬೇಕು. ಅಲ್ಲದೇ ಮಳೆ ನೀರು ಹರಿಯುವ ಚರಂಡಿ ಮೇಲೆ ನಿರ್ಮಿಸುತ್ತಿರುವ ಕಾಮಗಾರಿಯನ್ನು ತೆರವುಗೊಳಿಸಿ ವರದಿ ಸಲ್ಲಿಸಲು ನೋಟೀಸ್‌ನಲ್ಲಿ ಸೂಚಿಸಿದೆ. ತಪ್ಪಿದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್‌ನಲ್ಲಿ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.