ಪೋಡಿ ಮಾಡದ ಬಗರ್‌ಹುಕುಂ ಜಮೀನುಗಳನ್ನು ಸರಕಾರದ ವಶಕ್ಕೆ ಪಡೆಯಲು ಚಿಂತನೆ: ಉಡುಪಿ ಡಿಸಿ
ಉಡುಪಿ: ಸರ್ವೆ ಇಲಾಖೆಗೆ ಸಹಕರಿಸದೆ ಪೋಡಿ ಮಾಡದ ಬಗರ್‌ಹುಕುಂ ಜಮೀನುಗಳನ್ನು ಸರಕಾರದ ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಅಕ್ರಮ ಸಕ್ರಮದಲ್ಲಿ ಮಂಜೂರಾಗಿರುವ ಬಗರ್ ಹುಕುಂ ಜಮೀನುಗಳ ಪೋಡಿ ಮಾಡುವಂತೆ ರಾಜ್ಯ ಸರಕಾರ ನಿರ್ದೇಶನ ನೀಡಿದ್ದು, ಅದರಂತೆ ಪೋಡಿ ಆಂದೋಲನದ ಮೂಲಕ ಸರ್ವೆ ಇಲಾಖೆಯಿಂದ ಸರ್ವೆ ಮಾಡಲಾಗುತ್ತಿದೆ. ಆದರೆ ಕೆಲವರು ಈ ಬಗ್ಗೆ ಸರ್ವೆ ಮಾಡಿಕೊಳ್ಳುತ್ತಿಲ್ಲ ಮತ್ತು ಸಹಕಾರ ಕೂಡ ನೀಡುತ್ತಿಲ್ಲ ಎಂದರು.
ಈಗ ಸರಕಾರವೇ ಉಚಿತವಾಗಿ ಸರ್ವೆ ಮಾಡುತ್ತಿದೆ. ಬಗರ್‌ಹುಕುಂ ಸಾಗುವಳಿದಾರರು ಈಗ ಮಾಡಿಸಿಕೊಳ್ಳದಿದ್ದರೆ ಮುಂದೆ ಪ್ರತ್ಯೇಕವಾಗಿ ಅರ್ಜಿ ಹಾಕಿ ಸರ್ವೆ ಮಾಡಿಸಿಕೊಳ್ಳಲು ಕಷ್ಟವಾಗುತ್ತದೆ. ಪೋಡಿ ಮಾಡಿದರೆ ಸರಕಾರದ ಭಾಗವಾಗಿದ್ದ ಈ ಜಮೀನಿಗೆ ಖಾಸಗಿ ಆಗಿ ಅವರದ್ದೇ ಹೊಸ ಸರ್ವೆ ನಂಬರ್ ಸಿಗುತ್ತದೆ. ಇದರಿಂದ ಬಗರ್‌ಹುಕುಂ ಸಾಗುವಳಿದಾರರು ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ 8000 ಸರ್ವೆ ನಂಬರ್‌ನಲ್ಲಿ ಜಮೀನು ಮಂಜೂರಾತಿ ಯಾಗಿದೆ. 5041 ಸರ್ವೆ ನಂಬರ್ ಸ್ಕ್ಯಾನ್ ಆಗಿ ಬಗರ್‌ಹುಕುಂ ಆ್ಯಪ್‌ಗೆ ಅಪ್‌ಲೋಡ್ ಆಗಿದೆ. ಅದರಲ್ಲಿ ಸುಮಾರು 2500 ಸರ್ವೆ ನಂಬರ್‌ಗಳನ್ನು ತಹಶೀಲ್ದಾರ್ ಸರ್ವೆ ಕಳುಹಿಸಿಕೊಟ್ಟಿದ್ದಾರೆ. ಈಗಾಗಲೇ 1000 ಸರ್ವೆ ನಂಬರ್ ಅಳತೆ ಮಾಡಿ ಆರ್‌ಟಿಸಿ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಂಜೂರಾತಿಯಾದ ಜಮೀನುನನ್ನು ಬಳಕೆ ಮಾಡದಿದ್ದರೆ ಹಾಗೂ ಪೋಡಿಗೆ ಸಹಾಕರ ನೀಡದಿದ್ದರೆ ಅಂತಹ ಜಮೀನನ್ನು ಸರಕಾರದ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ಆ ಬಗ್ಗೆ ಚಿಂತನೆ ಮಾಡ ಬೇಕಾಗುತ್ತದೆ. ಆದುದರಿಂದ ಬಗರ್‌ಹುಕುಂ ಸಾಗುವಳಿದಾರರು ಈ ಆಂದೋಲನದಲ್ಲಿ ಕೈಜೋಡಿಸಿ ಸರ್ವೆಯರ್ ಜೊತೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.