×
Ad

ಕಾರ್ಕಳ: ಗ್ಯಾರಂಟಿ ಯೋಜನೆ‌ ಜಾರಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಅದಾಲತ್

Update: 2025-05-19 21:48 IST

ಕಾರ್ಕಳ: ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗಳಿಗೂ ತಲುಪಬೇಕು, ಈ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಅದಾಲತ್ ನಡೆಸಲಾಗುವುದು ಎಂದು ಕಾರ್ಕಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ‌ ಹೇಳಿದರು.

ಅವರು ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ ಸೋಮವಾರ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಈಗಾಗಲೇ ಕಾರ್ಕಳ ಹೆಬ್ರಿ ತಾಲೂಕುಗಳಲ್ಲಿ ಶೇಕಡಾ 90%ರಷ್ಟು ಗ್ಯಾರಂಟಿ ಯೋಜನೆಗಳಲ್ಲಿ ಪ್ರಗತಿ ಸಾಧಿಸಿದ್ದು, ಶೇಕಡ 10% ರಷ್ಟು ಅವಕಾಶ ವಂಚಿತರ ಸಮಸ್ಯೆಗಳನ್ನು ಕುರಿತು ಚರ್ಚೆಗೆ ಅವಕಾಶ ಸಿಗಲಿದ್ದು, ಈ ಅದಾಲತ್ ನಿಂದ ಗ್ರಾಮ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ. ಇನ್ನಾ ಗ್ರಾಮದಿಂದ ಗ್ರಾಮ ಅದಾಲತ್ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ತಿಳಿಸಿದರು.

ಸರಕಾರಿ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ತೋರಿಸಿದರೆ ಒರಿಜಿನಲ್ ಆಧಾರ್ ನೀಡುವಂತೆ ಕಂಡಕ್ಟರ್ ಒತ್ತಾಯಿಸುತ್ತಿದ್ದಾರೆ ಎಂಬ ದೂರನ್ನು ಸದಸ್ಯರು ಸಭೆಯ ಮುಂದಿಟ್ಟರು.

ಮಹಿಳೆಯರ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಜೆರಾಕ್ಸ್ ತೋರಿಸಿದರೂ ಅವಕಾಶ ನೀಡಬೇಕು ಹಾಗೂ ಮುಂದಿನ ಸಭೆಗೆ ಕೆಎಸ್ಆರ್ ಟಿಸಿ ಡಿಪೋ ಮೇನೇಜರ್ ಹಾಜರಾಗುವಂತೆ ಅಧ್ಯಕ್ಷರಾದ ಅಜಿತ್ ಹೆಗ್ಡೆ ಅವರು ಸೂಚಿಸಿದರು.

ಕಾರ್ಕಳ ತಾಲೂಕಿನಲ್ಲಿ 29243 ಕುಟುಂಬಗಳು ಅನ್ನಭಾಗ್ಯ ಯೋಜನೆಯ ಫಲಾನುಭವಿಯಾಗಿದ್ದು ಕುಟುಂಬದ ಯಜಮಾನ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗದ ಕಾರಣದಿಂದ 91ಕಾರ್ಡ್ ಗಳಿಗೆ ಪಡಿತರ ವಿತರಣೆ ಆಗಿಲ್ಲ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಸರ್ಕಾರದ ಅನ್ನಭಾಗ್ಯ ಯೋಜನೆ ಅರ್ಹರಿಗೆ ಸಿಗುವಂತಾಗಬೇಕು ಈ‌ ನಿಟ್ಟಿನಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಯೋಜನೆಯ ಮಾಹಿತಿ ಫಲಕಗಳನ್ನು ಪ್ರದರ್ಶಿಸುವಂತೆ ಅಧ್ಯಕ್ಷರು ಸೂಚಿಸಿದರು.

ಉಳಿದಂತೆ ಗ್ರಹ ಲಕ್ಷ್ಮೀ ಗ್ರಹಜ್ಯೋತಿ ಯುವನಿಧಿ ಯೋಜನೆಗಳ ಪ್ರಗತಿ ಕುರಿತಂತೆ ಅಧಿಕಾರಿಗಳು ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ರಾವ್ ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆಗಳ ಸರ್ವ ಸದಸ್ಯರು ಗಳು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News