ಸ್ಟಾರ್‌ಲಿಂಕ್‌ಗೆ ಅವಕಾಶ ದೇಶದ ಹಿತಾಸಕ್ತಿಗಳಿಗೆ ಹಾನಿಕಾರಕ: ಸಿಪಿಐಎಂ
ಉಡುಪಿ: ಭಾರತ ಸರಕಾರವು ಎಲೋನ್ ಮಸ್ಕ್ ಅವರ ಸ್ಟಾರ್ ಲಿಂಕ್‌ನ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅನುಮತಿ ನೀಡಿರುವುದನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ವಿರೋಧಿಸಿದೆ.
ಸ್ಟಾರ್ ಲಿಂಕ್ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ ಸಂಪೂರ್ಣ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಸ್ಟಾರ್ ಲಿಂಕ್ ಒಂದು ವಿದೇಶಿ ಕಾರ್ಪೊರೇಷನ್ ಆಗಿದ್ದು, ಭಾರತದ ನಿರ್ಣಾಯಕ ಮೂಲ ರಚನೆಯನ್ನು ವಿದೇಶಿ ಕೈಗಳಿಗೆ ವರ್ಗಾಯಿಸುವುದು ಗಂಭೀರ ಭದ್ರತಾ ಪರಿಣಾಮ ಗಳನ್ನು ಉಂಟುಮಾಡುತ್ತದೆ. ಇದು ನಮ್ಮ ದೂರಸಂಪರ್ಕ ವ್ಯವಸ್ಥೆಯ ಒಳಕ್ಕೆ ಮತ್ತು ನಮ್ಮ ಆಯಕಟ್ಟಿನ ಸಂವಹನಗಳ ಒಳಕ್ಕೆ ಕೂಡ ಯುಎಸ್ ಏಜೆನ್ಸಿಗಳಿಗೆ ಹಿಂಬಾಗಿಲನ್ನು ಒದಗಿಸುತ್ತದೆ.
ಇದು ದೇಶದ ಬಹುತೇಕ ಎಲ್ಲಾ ಭಾಗಗಳಿಗೆ ಅಗ್ಗದ ದೂರಸಂಪರ್ಕ ಮತ್ತು ಇಂಟರ್‌ನೆಟ್ ಸೇವೆಗಳನ್ನು ಒದಗಿಸುವ ಬಿಎಸ್‌ಎನ್‌ಎಲ್‌ನ್ನು ಮುಗಿಸಲು ಸರಕಾರದ ಮತ್ತೊಂದು ಪ್ರಯತ್ನವಾಗಿದೆ. ಸ್ಟಾರ್ ಲಿಂಕ್ ಕಾರ್ಯಾಚರಣೆಗಳಿಗೆ ಅವಕಾಶ ನೀಡುವುದರಿಂದ ದೀರ್ಘಾವಧಿಯಲ್ಲಿ ದೇಶದ ಹಿತಾಸಕ್ತಿಗಳಿಗೆ ಹಾನಿ ಯಾಗಲಿದೆ. ಸರ್ಕಾರವು ತನ್ನ ನಿರ್ಧಾರವನ್ನು ತಕ್ಷಣವೇ ರದ್ದುಗೊಳಿಸ ಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.