ತ್ರಾಸಿ- ಮರವಂತೆ ಬೀಚ್‌ಗಳಲ್ಲಿ ಸೂಚನಾಫಲಕ ಅಳವಡಿಕೆ
ಕುಂದಾಪುರ, ಜೂ.8: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ತ್ರಾಸಿ- ಮರವಂತೆ ಸಮುದ್ರ ತೀರಕ್ಕೆ ರಜಾದಿನ, ವಾರದ ಕೊನೆಯಲ್ಲಿ ಪ್ರವಾಸಿಗರ ಬರುವ ಸಂಖ್ಯೆ ಹೆಚ್ಚಳವಾಗಿದ್ದು ಅಲೆಗಳಬ್ಬರ ಜಾಸ್ಥಿಯಿದ್ದರೂ ಪೊಲೀಸ್ ಹಾಗೂ ಇಲ್ಲಿ ನಿಯೋಜಿಸಿದ ಸಿಬ್ಬಂದಿಗಳ ಮಾತನ್ನು ಲೆಕ್ಕಿಸದೆ ಪ್ರವಾಸಿಗರು ನೀರಿಗಿಳಿಯುವ ದೃಶ್ಯ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಭಾಗದಲ್ಲಿ ಟೇಪ್ ಕಟ್ಟಿ, ಸೂಚನಾಫಲಕಗಳನ್ನು ಅಳವಡಿಸಿದೆ.
’ಸಮುದ್ರದ ಅಲೆಗಳ ಜೊತೆ ಮೋಜು-ಮಸ್ತಿ ಬೇಡ’, ’ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಸಮುದ್ರದ ಅಲೆಗಳಿಗೆ ಬಲಿಯಾಗಬೇಡಿ’, ’ಸಮುದ್ರಕ್ಕೆ ಇಳಿಯುವ ಮೊದಲು ನಿಮ್ಮ ಕುಟುಂಬದವರು ನಿಮಗಾಗಿ ಕಾದಿರುತ್ತಾರೆ ಎನ್ನುವುದನ್ನು ನೆನಪಿಸಿಕೊಳ್ಳಿ’, ’ಆಳ ಸಮುದ್ರವಾದ್ದರಿಂದ ಯಾರೂ ನೀರಿಗೆ ಇಳಿಯ ಬಾರದು’ ಎಂಬ ಬರಹದ ಸೂಚನಾ ಫಲಕ ಅಳವಡಿಸಲಾಗಿದೆ.
ಶನಿವಾರ ಸಂಜೆ ಗಂಗೊಳ್ಳಿ ಎಸ್ಸೈ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಸ್ಥಳೀಯರ ಸಹಕಾರದಲ್ಲಿ ಎಚ್ಚರಿಕಾ ಕ್ರಮಕೈಗೊಂಡರು. ಪ್ರವಾಸಿಗರಿಗೆ ಸಮುದ್ರದ ಅಲೆಗಳ ರಭಸದ ಬಗ್ಗೆ ಹಾಗೂ ಕಳೆದ ಕೆಲವು ವರ್ಷಗಳಿಂದ ಸಂಭವಿಸಿದ ದುರಂತಗಳ ಬಗ್ಗೆ ಮನದಟ್ಟು ಮಾಡಿದ್ದಲ್ಲದೆ ಅಪಾಯಕಾರಿ ಯಾಗದಂತೆ ಮೇಲ್ಭಾಗದಲ್ಲಿ ನಿಂತು ಪ್ರಕೃತಿ ಸೌಂದರ್ಯ ಆಸ್ವಾದಿಸುವಂತೆ ಸಲಹೆ ನೀಡಿದರು. ಕಾನೂನು ಮೀರಿ ನಡೆದುಕೊಳ್ಳುವರಿಗೆ ನಿಯಮಾನುಸಾರ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.