ಮುಂಡಾಜೆ ಸದಾಶಿವ ಶೆಟ್ಟಿ ನಿಧನ
ಉಡುಪಿ, ಜೂ.8: ತೆಂಕುತಿಟ್ಟಿನ ಅಗ್ರಮಾನ್ಯ ವೇಷಧಾರಿಗಳಲ್ಲಿ ಓರ್ವರಾದ ಮುಂಡಾಜೆ ಸದಾಶಿವ ಶೆಟ್ಟಿ(67) ಶನಿವಾರ ಹೃದಯಾಘಾತದಿಂದ ನಿಧನರಾದರು.
ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದು ಆರಂಭದ ಹತ್ತು ವರ್ಷ ಧರ್ಮಸ್ಥಳ ಮೇಳದಲ್ಲೇ ತಿರುಗಾಟ ಮಾಡಿ ಮುಂದೆ ಕದ್ರಿ, ಕುಂಬಳೆ, ಬಪ್ಪನಾಡು, ಮಧೂರು,ಸಸಿಹಿತ್ಲು ಮೇಳಗಳಲ್ಲಿ ಹಾಗೂ ಕೊನೆಯ ಇಪ್ಪತ್ತು ವರ್ಷ ಕಟೀಲು ಹೀಗೆ ಒಟ್ಟೂ ಐದುವರೆ ದಶಕ ಕಲಾಸೇವೆ ಗೈದಿದ್ದರು. ಕಟೀಲು ಮೇಳದಲ್ಲಿ ಎರಡು ದಶಕ ಪ್ರಬಂಧಕರಾಗಿ ಕಾರ್ಯ ನಿರ್ವಹಿಸಿದ್ದರು.
ಎಲ್ಲಾ ರೀತಿಯ ಪೌರಾಣಿಕ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿ ಕಲಾರಸಿಕರ ಪ್ರೀತಿಗೆ ಪಾತ್ರರಾಗಿ ದ್ದರು. ಕನ್ನಡ ತುಳು ಎರಡರಲ್ಲೂ ಸಮರ್ಥ ನಿರ್ವಹಣೆ ಮಾಡುತ್ತಿದ್ದ ಇವರು ಪುಂಡು ವೇಷ, ರಾಜ ವೇಷ, ನಾಟಕೀಯ ಮತ್ತು ಸ್ತ್ರೀವೇಷ ಹೀಗೆ ಎಲ್ಲವನ್ನೂ ಮಾಡಬಲ್ಲ ಪರಿಪೂರ್ಣ ಕಲಾವಿದರಾಗಿದ್ದರು.
ಅವರಿಗೆ 2017ರಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ನಿ, ಪುತ್ರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧಾರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.