×
Ad

ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ಕೌಶಲ್ಯ ಶಿಕ್ಷಣ: ಮಣಿಪಾಲ ಕೌಶಲ್ಯಾಭಿವೃದ್ಧಿ ಕೇಂದ್ರದೊಂದಿಗೆ ಒಡಂಬಡಿಕೆ

Update: 2025-06-09 21:50 IST

ಉಡುಪಿ: ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ಶಿಕ್ಷಣವನ್ನು ನೀಡುವುದಕ್ಕಾಗಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ಮಣಿಪಾಲದ ಡಾ.ಟಿ.ಎಂ.ಪೈ ಫೌಂಡೇಶನ್‌ನ ಅಂಗಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನೊಂದಿಗೆ ಒಡಂಬಡಿಕೆ (ಎಂಓಯು) ಮಾಡಿ ಕೊಂಡಿದೆ.

ಕೌಶಲ್ಯಾಧಾರಿತ ಕೋರ್ಸುಗಳ ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಉದ್ಯೋಗ ಕೌಲ್ಯವನ್ನು ವೃದ್ಧಿಸು ವುದು, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್, ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಾಗಾರಗಳು, ಕೈಗಾರಿಕಾ ಭೇಟಿ, ಕೈಗಾರಿಕಾ ವಾತಾವರಣ ಪರಿಚಯಿಸುವಿಕೆ, ಎರಡು ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಮತ್ತು ಪದವಿ ಜೊತೆಗೆ ಕೆಲವು ಕೌಶಲ್ಯ ಕೋರ್ಸುಗಳ ಶಿಕ್ಷಣ ನೀಡುವುದು ಈ ಒಡಂಬಡಿಕೆಯ ಮುಖ್ಯ ಅಂಶಗಳಾಗಿವೆ.

ಕಾಲೇಜಿನ ಪರವಾಗಿ ಒಡಂಬಡಿಕೆಗೆ ಸಹಿ ಮಾಡಿರುವ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ಮಾತನಾಡಿ, ವಿದ್ಯಾರ್ಥಿ ಗಳಿಗೆ ಕಲಿಕೆಯ ಸಮಯದಲ್ಲಿ ಕೈಗಾರಿಕೆಗೆ ಪೂರಕ ಮತ್ತು ಉದ್ಯೋಗ ದೊರಕುವಂತಹ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಪದವಿ ಪೂರೈಸುತ್ತಿದ್ದಂತೆ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್ ಸರ್ವಿಸಸ್ ವಲಯಗಳಲ್ಲಿ ಉದ್ಯೋಗಗಿಟ್ಟಿಸಲು ಹೊಸ ಬಿ.ಕಾಂ. ಕೋರ್ಸ್ - ಎ.ಇ.ಡಿ.ಪಿ.ಯನ್ನು ಕಾಲೇಜಿನಲ್ಲಿ ಈ ವರ್ಷ ಪ್ರಾರಂಭಿಸಲಾಗಿದ್ದು, ಕಲಿಕೆಯ ಜೊತೆಗೆ ಗಳಿಕೆಯನ್ನು ಮಾಡಲು ಅಪ್ರೆಂಟೈಸ್‌ಶಿಪ್‌ನ ಅವಕಾಶ ಕಲ್ಪಿಸಲಾಗಿದೆ ಎಂದರು.

ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್‌ನ ಚೇರ್ಮನ್ ಆದ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಈ ಸಂದರ್ಭದಲ್ಲಿ ಮಾತನಾಡುತ್ತಾ ಪದವಿ ಜೊತೆಗೆ ಉದ್ಯೋಗ ಕೌಶಲಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತೀರಾ ಅಗತ್ಯ. ಭಾಷಾ ಕೌಶಲ್ಯ, ಸಂವಹನ, ಕಂಪ್ಯೂಟರ್ ಪರಿಣತಿ, ವೃತ್ತಿ ಕೌಶಲ್ಯಗಳು, ನಾಯಕತ್ವ ಕಲೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ತಯಾರಿ ಮತ್ತು ಜ್ಞಾನವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಸ್ವ-ಉದ್ಯೋಗಕ್ಕೆ ಸಂಬಂಧಿಸಿ ವಿವಿಧ ಕೋರ್ಸ್‌ಗಳಾದ ಸಿಎನ್‌ಸಿ ಮಶೀನ್ಸ್, ಕ್ಯಾಡ್ ಸೆಂಟರ್, ಫ್ಯಾಶನ್ ಡಿಸೈನ್, ರೊಬೊಟಿಕ್ಸ್, ತ್ರಿಡಿ, ಅನಿಮೇಷನ್ ಟೆಕ್ನಾಲಜಿ, ಆಟೊಮೋಟಿವ್ ಸರ್ವಿಸ್, ಇಂಟೀರಿಯರ್ ಡಿಸೈನ್, ಫರ್ನೀಚರ್ ಆಂಡ್ ಪಿಕ್ಸ್‌ಚರ್ಸ್‌, ಆಟೋಮೇಶನ್, ಎಐ, ಎಂ.ಎಲ್, ಸೈಬರ್ ಸೆಕ್ಯೂರಿಟಿ, ಇವಿ ಟೆಕ್ನಾಲಜಿ, ಬ್ಯೂಟಿ ಆಂಡ್ ವೆಲ್‌ನೆಸ್ ಮುಂತಾದವುಗಳು ಅವಶ್ಯಕವಾಗಿದೆ ಎಂದರು.

ಎಂ.ಎಸ್.ಡಿ.ಸಿ.ಯ ರಿಜಿಸ್ಟ್ರಾರ್ ಡಾ.ಅಂಜಯ್ಯ ದೇವಿನೇನಿ, ಪ್ರವೇಶ ಮತ್ತು ಸಂಪರ್ಕಾಧಿಕಾರಿ ಡಾ. ನಾರಾಯಣ ಶೆಣೈ ಕೆ., ತೆಂಕನಿಡಿಯೂರು ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್, ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಶಾಂತ ಎನ್, ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇರಾಂದ ಉಪಸ್ಥಿತರಿದ್ದರು.

ಕಾಲೇಜಿನ ಪ್ಲೇಸ್‌ಮೆಂಟ್ ಆಫೀಸರ್ ದಿನೇಶ್ ಎಂ. ಮತ್ತು ಎಂಎಸ್‌ಡಿಸಿಯ ಅನುಷಾ ಎರಡು ಸಂಸ್ಥೆಗಳ ಒಡಂಬಡಿಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News