ಜಪಾನ್‌ನ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಕಾರ್ಕಳ ಕುಕ್ಕುಜೆ ಪ್ರೌಢ ಶಾಲೆ ಬಾಲಕಿಯರಿಬ್ಬರ ಆಯ್ಕೆ
ಉಡುಪಿ, ಜೂ.11: ಜಿಲ್ಲೆಯ ಅತ್ಯಂತ ಗ್ರಾಮೀಣ ಭಾಗದ ಸರಕಾರಿ ಪ್ರೌಢಶಾಲೆಯೊಂದರ ಒಂದೇ ತರಗತಿಯ ಇಬ್ಬರು ಹೆಣ್ಣುಮಕ್ಕಳು ಜಪಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ತಮ್ಮ ವಿಜ್ಞಾನ ಪ್ರಾಜೆಕ್ಟ್‌ನ್ನು ಪ್ರಸ್ತುತ ಪಡಿಸಲು ಆಯ್ಕೆಯಾಗಿರುವುದು ಲಿಂಗ ಸಮಾನತೆಯನ್ನು ಸಾಕಾರಗೊಳಿಸುವಲ್ಲಿ ದೇಶದ ನಾರಿ ಶಕ್ತಿಗೆ ದೊರಕಿರುವ ಅತ್ಯದ್ಭುತ ಪ್ರೇರಣೆ ಯಾಗಿದೆ. ಇದು ಸರಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಸಾಧನೆಗೂ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲದ ತಮ್ಮ ಕಚೇರಿಯಲ್ಲಿ, ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ‘ಇನ್‌ಸ್ಪಾಯರ್ ಅವಾರ್ಡ್ ಮಾನಕ್’ ಸ್ಪರ್ಧೆಯ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ, ಜೂನ್ 15ರಿಂದ 21 ರವರೆಗೆ ಜಪಾನ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನ ‘ಸುಕುರಾ’ಕ್ಕೆ ಆಯ್ಕೆಯಾದ ಕಾರ್ಕಳ ತಾಲೂಕಿನ ಕುಕ್ಕುಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಅಮೂಲ್ಯ ಹಾಗೂ ನಿಕಿತಾ ಅವರುಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಿದ್ದರು.
ಕುಕ್ಕುಜೆ ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲರ ಮಾರ್ಗದರ್ಶನದಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯ ಮಾಡೆಲ್‌ಗಳನ್ನು ಪ್ರಸ್ತುತಪಡಿಸಿದ್ದರು. ಇದು ಇನ್‌ಸ್ಪಾಯರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಮೂಲಕ ಒಂದೇ ತರಗತಿಯ ಇಬ್ಬರು ಹೆಣ್ಣುಮಕ್ಕಳು ಜಪಾನ್‌ನ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಗೊಂಡ ದೇಶದ ಮೊದಲ ಶಾಲೆ ಎಂಬ ಕೀರ್ತಿಗೆ ಕುಕ್ಕುಜೆ ಪ್ರೌಢಶಾಲೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಅಶೋಕ ಕಾಮತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀಕ್ಷಕ ನಾಗರಾಜ ಕೆ, ಶಿಕ್ಷಕ ಸುರೇಶ್ ಮರಕಾಲ, ಅಮೂಲ್ಯ ಮತ್ತು ನಿಕಿತ ಇವರ ಪೋಷಕರು ಉಪಸ್ಥಿತರಿದ್ದರು.
ಅಪೂರ್ವ ಸಾಧನೆ: ಕಳೆದ ವರ್ಷ ನಡೆದ ರಾಷ್ಟ್ರಮಟ್ಟದ ಇನ್‌ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಅಮೂಲ್ಯ ಹೆಗ್ಡೆ ಅವರ ‘ಫ್ಲಡ್ ಡಿಟೆಕ್ಟರ್’ ಪ್ರಾಜೆಕ್ಟ್ ಕಂಚಿನ ಪದಕ ಗೆದ್ದಿದ್ದರೆ, ನಿಕಿತಾ ರಚಿಸಿದ ‘ರೋಪೋ ಮೀಟರ್’ ಪ್ರಾಜೆಕ್ಟ್ ಪ್ರೋತ್ಸಾಹಕ ಬಹುಮಾನ ಜಯಿಸಿತ್ತು.
ಅಮೂಲ್ಯ ಹೆಗ್ಡೆ ಅವರ ನಿರ್ಮಿಸಿದ ವಿಜ್ಞಾನ ಮಾಡೆಲ್ ‘ಫ್ಲಡ್ ಡಿಟೆಕ್ಟರ್’ ಪ್ರವಾಹ, ಅತಿವೃಷ್ಟಿಯಂಥ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣ ಉಳಿಸಬಲ್ಲ ಸರಳ ತಂತ್ರಜ್ಞಾನದ ಯಂತ್ರವಾಗಿದೆ. ನಿಕಿತಾ ಅವರ ರೋಪೋ ಮೀಟರ್ ವಯರ್, ಕೇಬಲ್, ಹಗ್ಗ ಮೊದಲಾದ ಉದ್ದನೆಯ ವಸ್ತುಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಕರಾರುವಕ್ಕಾಗಿ ಅಳತೆ ಮಾಡುತ್ತದೆ.
ಕುಕ್ಕುಜೆಯಂಥ ಗ್ರಾಮೀಣ ಪ್ರದೇಶದ ಸರಕಾರಿ ಶಾಲಾ ಮಕ್ಕಳ ಈ ವಿಜ್ಞಾನ ಮಾದರಿ ಪ್ರಾಜೆಕ್ಟ್ ಗಳು ಜಪಾನಿನಲ್ಲಿ ನಡೆಯುವ ‘ಸುಕುರಾ’ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಸಂದ ಗೌರವವೆನಿಸಿಕೊಂಡಿದೆ.
ಭಾರತದಿಂದ ಒಟ್ಟು 54 ಮಂದಿ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ತಾವು ತಯಾರಿಸಿದ ವಿಜ್ಞಾನ ಮಾಡೆಲ್‌ಗಳನ್ನು ಪ್ರದರ್ಶಿಸಲು ಆಯ್ಕೆಯಾಗಿದ್ದಾರೆ. ಇವರಲ್ಲಿ 14 ಮಂದಿ ಕರ್ನಾಟಕದಿಂದ ಆಯ್ಕೆಯಾಗಿ ದ್ದಾರೆಂದು ತಿಳಿದುಬಂದಿದೆ.