ಮಲ್ಪೆ| ಪಾನಿಪೂರಿ ವಿಚಾರದಲ್ಲಿ ಗಲಾಟೆ: ಒಂಭತ್ತು ಮಂದಿ ಬಂಧನ
Update: 2025-06-11 21:10 IST
ಮಲ್ಪೆ, ಜೂ.11: ಮಲ್ಪೆಬೀಚ್ ಬಳಿ ಜೂ.10ರಂದು ರಾತ್ರಿ ಪಾನಿಪೂರಿ ವಿಚಾರವಾಗಿ ನಡೆದ ಗಲಾಟೆ ಸಂಬಂಧ ಒಟ್ಟು ಒಂಭತ್ತು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಪಾನಿಪೂರಿ ಅಂಗಡಿಯಲ್ಲಿ ಹೆಚ್ಚುವರಿಯಾಗಿ ಒಂದು ಪಾನಿ ಪೂರಿ ನೀಡುವ ವಿಷಯವಾಗಿ ಪ್ರವಾಸಕ್ಕೆ ಬಂದ ಮಂಡ್ಯ ಜಿಲ್ಲೆಯ ಪ್ರವಾಸಿಗರಿಗೆ ಮತ್ತು ಸ್ಥಳೀಯ ಪಾನಿ ಪುರಿ ಅಂಗಡಿಯವರಿಗೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ಪ್ರತಿದೂರು ನೀಡಲಾಗಿದ್ದು ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಎರಡೂ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದ ಸುದೀಪ, ಸಂಪತ್, ಪುನೀತ, ಮಹೇಶ, ಕನ್ನ ವೈಜಿ, ಅರವಿಂದ ಹಾಗೂ ಪಾನಿಪುರಿ ಅಂಗಡಿಯ ರಮೇಶ, ಉತ್ತರ ಪ್ರದೇಶದ ಮೋನು ಸಾಹು, ವಿನೋದ್ ಎಂಬವವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.