ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿಯಲ್ಲಿ ಸಹಕಾರಿ ಸಂಸ್ಥೆಗಳಿಗೆ ಪ್ರಥಮ ಪ್ರಾಶಸ್ತ್ಯ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಭಾರತದಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ವಿಸ್ತಾರವಾಗಿ ಬೆಳೆಯುತ್ತಿದ್ದು, ಮುಂದೆ ಇಡೀ ಆಡಳಿತ ವ್ಯವಸ್ಥೆಯೇ ಸಹಕಾರಿ ಕ್ಷೇತ್ರದ ಮೂಲಕ ನಡೆಯುವ ಸಾಧ್ಯತೆ ಇದೆ. ಅದೇ ರೀತಿ ಸಹಕಾರಿ ಸಂಸ್ಥೆಗಳಿಗೆ ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಏಜೆನ್ಸಿಯಲ್ಲಿ ಪ್ರಥಮ ಪ್ರಾಶಸ್ತ್ಯ ಯೋಚನೆ ಕೇಂದ್ರ ಸರಕಾರದ ಮುಂದಿದೆ. ಅಲ್ಲದೆ ಸಹಕಾರಿ ಸಂಸ್ಥೆಗಳ ಮೂಲಕ ವೊಲ್ವೋ ಸಹಿತ ಸಾರಿಗೆ ವ್ಯವಸ್ಥೆ ಮುನ್ನಡೆಸಲು ಯೋಜಿಸಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ರಾಜ್ಯದ ಸೌಹಾರ್ದ ಸಹಕಾರಿಗಳ ಸಾಮಾನ್ಯ ಸೇವಾ ಕೇಂದ್ರಗಳ ಉದ್ಘಾಟನೆಯನ್ನು ಸೋಮವಾರ ಉಡುಪಿಯ ಹೊಟೇಲ್ ಡಯಾನ ಸಭಾಂಗಣದಲ್ಲಿ ನೆರವೇರಿಸಿ ಅವರು ಮಾತನಾಡುತಿದ್ದರು.
ಪ್ರಸ್ತುತ ಭಾರತದಲ್ಲಿ ಒಂದಲ್ಲ ಒಂದು ಕಾರಣಕ್ಕೆ 30ಕೋಟಿ ಮಂದಿ ಸಹಕಾರಿ ಕ್ಷೇತ್ರದ ಸದಸ್ಯತ್ವವನ್ನು ಹೊಂದಿದ್ದಾರೆ. ಮುಂದಿನ 5-10ವರ್ಷಗಳಲ್ಲಿ ಈ ಸಂಖ್ಯೆ ದುಪ್ಪಟ್ಟು ಆಗಿ, ನಮ್ಮ ದೇಶದ ಒಟ್ಟು ಜನ ಸಂಖ್ಯೆಯ ಶೇ.50ರಷ್ಟು ಮಂದಿ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದುದರಿಂದ ದೇಶದ ಮುಂದಿನ ಭವಿಷ್ಯ ಸಹಕಾರಿ ಕ್ಷೇತ್ರದ ಕೈಯಲ್ಲಿದೆ ಎಂದರು.
ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗಳ ಮೂಲಕ ಸಾಮಾನ್ಯ ಸೇವಾ ಕೇಂದ್ರಗಳು ಇನ್ನು ಮುಂದೆ ಜನಸೇವೆಗೆ ತೆರೆದುಕೊಳ್ಳಲಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸೇವೆಗಳು ತಲಮಟ್ಟದ ಜನರಿಗೆ ಅನುಕೂಲ ವಾಗಬೇಕಾದರೆ, ಆಡಲಿತವು ಗ್ರಾಮೀಣ ಮಟ್ಟಕ್ಕೆ ವ್ಯಾಪಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 25 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಕೇಂದ್ರದ ಮೂಲಕ ಬಡವರ ಕಲ್ಯಾಣ ಯೋಜನೆಗಳು ಅನುಷ್ಠಾನ ಗೊಳಿಸಲಾಗುವುದು. ಹಿಂದೆ ಜನ ವಿವಿಧ ಯೋಜನೆಗಳಿಗಾಗಿ ನಾಡ ಕಚೇರಿ, ತಾಲೂಕು, ಡಿಸಿ ಕಚೇರಿಗೆ ಅಲೆದಾಡುತ್ತಿದ್ದರು. ಇನ್ನು ಮುಂದೆ ಈ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಇಲ್ಲಿಯೇ ಯೋಜನೆಯನ್ನು ಪಡೆದುಕೊಳ್ಳ ಬಹುದಾಗಿದೆ. ಇದು ಮಹತ್ವ ಹಾಗೂ ಅಧಿಕಾರ ವಿಕೇಂದ್ರಿಕರಣದ ಅಪರೂಪದ ವ್ಯವಸ್ಥೆ ಆಗಿದೆ. ಆ ಮೂಲಕ ಸಹಕಾರಿ ಕ್ಷೇತ್ರಕ್ಕೆ ಬಹಳ ದೊಡ್ಡ ಶಕ್ತಿ ಬಂದಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಸಿಎ ಜಿ.ನಂಜನಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸೌಹಾರ್ದ ಸಹಕಾರಿಯ ರಾಜ್ಯ ನಿರ್ದೇಶಕ ಮಂಜುನಾಥ್ ಎಸ್.ಕೆ., ಭಾರತಿ ಜಿ.ಭಟ್, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಪಿ.ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.
ಸಂಯುಕ್ತ ಸಹಕಾರಿ ಮೈಸೂರು ಪ್ರಾಂತಿಯ ಅಧಿಕಾರಿ ಗುರುಪ್ರಸಾದ್ ಬಂಗೇರ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಟಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.