×
Ad

ಬಡವರ ಪಿಂಚಣಿ ರದ್ದುಗೊಳಿಸಿದರೆ ಜೋಕೆ: ಸಂಸದ ಕೋಟ ಎಚ್ಚರಿಕೆ

Update: 2025-06-23 17:22 IST

ಉಡುಪಿ, ಜೂ.23: ಸಂವಿಧಾನದ 73ನೇ ತಿದ್ದುಪಡಿಗೆ ಪೂರಕವಾಗಿ ಗ್ರಾಪಂಗಳಲ್ಲಿ ನೀಡುತ್ತಿರುವ ಏಕ ವಿನ್ಯಾಸ ನಕ್ಷೆ(9/11) ಹಕ್ಕನ್ನು ಕಸಿದು ಕಾಂಗ್ರೆಸ್ ನೇತೃತ್ವದ ಸರಕಾರ ನಗರ ಪ್ರಾಧಿಕಾರಕ್ಕೆ ನೀಡಿದ್ದನ್ನು ಖಂಡಿಸಿ ಮತ್ತು ಈ ಅಧಿಕಾರವನ್ನು ಗ್ರಾಪಂಗಳಿಗೆ ಮರಳಿ ನೀಡಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ ಗ್ರಾಪಂಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಎದುರು ಇಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಕೋಟ, ಕೋಟತಟ್ಟು, ಸಾಲಿಗ್ರಾಮ ಮೊದಲಾದ ಗ್ರಾಪಂ ಎದುರು ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸರಕಾರ 9/11 ನೀಡುವ ಅಧಿಕಾರವನ್ನು ಗ್ರಾಪಂನಿಂದ ಕಿತ್ತು ಕೊಂಡು ನಗರ ಪ್ರಾಧಿಕಾರಕ್ಕೆ ನೀಡಬೇಕೆಂಬ ತೀರ್ಮಾನದ ಹಿಂದೆ ಗ್ರಾಪಂಗಳ ಶಾಸನಬದ್ದ ಹಕ್ಕನ್ನು ಕಸಿವ ಸಂಚು ಅಡಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿ 9/11ಗೆ ವಿಪರೀತ ಲಂಚದ ಆರೋಪ ಕೇಳಿ ಬರುತ್ತಿದ್ದು, ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರಕಾರ ರಾಜ್ಯದಲ್ಲಿ 9 ಲಕ್ಷಕ್ಕೂ ಮೀರಿ ವೃದ್ಧಾಪ್ಯ ವೇತನ, 14 ಲಕ್ಷ ಸಂಧ್ಯಾ ಸುರಕ್ಷಾ ಪುನರ್ ಪರಿಶೀಲಿಸುವ ಹೆಸರಲ್ಲಿ ಬಡವರ ಸಂಧ್ಯಾಕಾಲದ ಪಿಂಚಣಿ ತಡೆಹಿಡಿಯಲು ಹೊರಟಿದೆಂದು ಆರೋಪಿಸಿದರು.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು. ಉಡುಪಿ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳ ಎದುರು ಶಾಸಕ ಯಶ್‌ಪಾಲ್ ನೇತೃತ್ವದಲ್ಲಿ ಧರಣಿ ನಡೆಯಿತು.

ಅದೇ ರೀತಿ ಅಮಾಸೆಬೈಲು ಗ್ರಾಪಂ ಎದುರು ನಡೆದ ಧರಣಿಯಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಪಾಲ್ಗೊಂಡರು. ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳ ಎದುರು ನಡೆದ ಧರಣಿಯಲ್ಲಿ ಶಾಸಕ ಸುನೀಲ್ ಕುಮಾರ್ ಭಾಗವಹಿಸಿ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಈ ಧರಣಿಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News