ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದಿಂದ ಜಿಲ್ಲಾಧಿಕಾರಿ, ಎಸ್ಪಿ ಭೇಟಿ
ಉಡುಪಿ : ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಹಾಗೂ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಪ್ರತ್ಯೇಕ ವಾಗಿ ಭೇಟಿ ನೀಡಿ ಅಭಿನಂದಿಸಲಾಯಿತು.
ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಪರವಾಗಿ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ ಶುಭಾಶಯ ಮತ್ತು ಆಶೀರ್ವಾದಗಳನ್ನು ಕೋರಿದ ನಿಯೋಗ ಧರ್ಮಪ್ರಾಂತ್ಯದ ವತಿಯಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲಾ ರೀತಿಯ ಸಹಕಾರದ ಭರವಸೆಯನ್ನು ನೀಡಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿಕೆ, ಕ್ರೈಸ್ತ ಸಮುದಾಯದ ಸಂಸ್ಥೆಗಳ ಕುರಿತು ಮಾಹಿತಿ ಪಡೆದು ಯಾವುದೇ ರೀತಿಯಲ್ಲಿ ಸಹಕಾರ ಬೇಕಾದಲ್ಲಿ ಜಿಲ್ಲಾಡಳಿತದಿಂದ ಸ್ಪಂದಿಸಲಾಗುವುದು. ಜಿಲ್ಲೆಯ ಅಭಿವೃದ್ಧಿಗೆ ಸಮುದಾಯದ ಸಹಕಾರವನ್ನು ಕೋರಿದರು.
ನಿಯೋಗದ ಭರವಸೆಗೆ ಸ್ಪಂದಿಸಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಸಮುದಾಯಕ್ಕೆ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯಿಂದ ಸಹಕಾರ ನೀಡಲು ಬದ್ಧ. ಸಮುದಾಯ ಕೂಡ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುವಂತೆ ಮನವಿ ಮಾಡಿದರು.
ನಿಯೋಗದಲ್ಲಿ ಧರ್ಮಪ್ರಾಂತ್ಯದ ಕುಲಪತಿಗಳಾದ ವಂ|ಸ್ಟೀವನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾ ಧಿಕಾರಿಗಳಾದ ವಂ|ಡೆನಿಸ್ ಡೆಸಾ ಹಾಗೂ ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಮತ್ತು ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.