×
Ad

ಕೊಲ್ಲೂರು ಅಭಿವೃದ್ಧಿಗೆ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಸಮಸ್ತರ ಸಭೆ: ಸಚಿವ ರಾಮಲಿಂಗ ರೆಡ್ಡಿ

Update: 2025-06-24 21:25 IST

ಕೊಲ್ಲೂರು (ಕುಂದಾಪುರ), ಜೂ.24: ರಾಜ್ಯದಲ್ಲಿ ಎರಡನೇ ಅತಿಹೆಚ್ಚು ಆದಾಯ ಬರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕೆಲಸಗಳಿಗೆ ಕಾಯಕಲ್ಪ ನೀಡಲು ಹಾಗೂ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಕಾರ್ಯಪ್ರವೃತ್ತವಾಗಿದ್ದು, ಈ ಕುರಿತು ಮುಂದಿನ ತಿಂಗಳು ವ್ಯವಸ್ಥಾ ಪನಾ ಸಮಿತಿ, ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳು ಹಾಗೂ ಪ್ರಮುಖರ ಸಭೆಯನ್ನು ಬೆಂಗಳೂರಿ ನಲ್ಲಿ ಕರೆಯಲಾಗಿದೆ ಎಂದು ರಾಜ್ಯ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಇಲಾಖೆ ಅಧಿಕಾರಿಗಳ, ಜನಪ್ರತಿನಿಧಿಗಳು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರ ಸಮಾ ಲೋಚನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊಲ್ಲೂರು ದೇಗುಲಕ್ಕೆ ಸಂಬಂಧಪಟ್ಟಿರುವ ಜಾಗಗಳು ಖಾಸಗಿ ವ್ಯಕ್ತಿಗಳಿಂದ ಪರಭಾರೆಯಾಗಿರುವ ಹಾಗೂ ಒತ್ತುವರಿಯಾಗಿರುವ ಕುರಿತು ಮಾಹಿತಿ ಇದ್ದು, ಇದನ್ನು ತೆರವುಗೊಳಿಸುವ ಕುರಿತು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಇಲ್ಲಿನ ಒಳಚರಂಡಿ ಅವ್ಯವಸ್ಥೆ ಸರಿಪಡಿಸುವ ಜೊತೆಗೆ ಪಾರ್ಕಿಂಗ್ ವ್ಯವಸ್ಥೆಗೆ ಶಾಶ್ವತ ಯೋಜನೆ ಕಂಡುಕೊಳ್ಳಲಾಗುತ್ತದೆ. ದೇಗುಲದ ಅಭಿವೃದ್ಧಿಗೆ ಅಗತ್ಯವಾಗಿರುವ ಕಂದಾಯ ಭೂಮಿಗಳನ್ನು ಪಡೆದುಕೊಳ್ಳುವ ಕುರಿತು ಕಂದಾಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಆಗಿರುವ ಒತ್ತುವರಿ ತೆರವು ಹಾಗೂ ಇತರ ಕಾನೂನು ಹೋರಾಟಗಳಿಗೆ ಮಾರ್ಗದರ್ಶನ ಹಾಗೂ ಸಲಹೆ ನೀಡಲು, ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅವರನ್ನು ಸಂಪರ್ಕಿಸಲಾಗುತ್ತದೆ. ದೇಗುಲದ ಪ್ರವೇಶ ದ್ವಾರದ ಗೇಟ್‌ಗಳಿಗೆ ಅಳವಡಿಸಿರುವ ಬೀಗದ ಕೀಲಿಕೈ ಖಾಸಗಿ ವ್ಯಕ್ತಿಗಳ ಬಳಿ ಇರುವುದು ಸರಿಯಲ್ಲ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಒಳ ವ್ಯಾಪ್ತಿಯಲ್ಲಿ ಇರುವ ಖಾಸಗಿ ಪಾರ್ಕಿಂಗ್ ವ್ಯವಸ್ಥೆಗೆ ನಿರ್ಬಂಧ ಹಾಕಬೇಕು. ಒತ್ತುವರಿ ಆಗಿರುವ ದೇಗುಲದ ಭೂಮಿಗಳನ್ನು ತೆರವು ಗೊಳಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ದೊರಕಲು ಅನುಕೂಲವಾಗುವಂತೆ ದೇವಸ್ಥಾನದ ವತಿಯಿಂದ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಅಭಿಪ್ರಾಯ ಹೇಳಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಇಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ತಿಳಿದುಬಂದಿದ್ದು ಈ ಬಗ್ಗೆ ಶಾಶ್ವತ ಕ್ರಮವಾಗಬೇಕು. ಕೊಲ್ಲೂರಿನಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಾಣವಾಗಬೇಕು ಎಂದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಮಾತನಾಡಿ, ದೇವಸ್ಥಾನದ ವತಿಯಿಂದ ನಡೆಯುವ ಐದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಬೇಕು. ಪಾರ್ಕಿಂಗ್ ವ್ಯವಸ್ಥೆಗಾಗಿ ಶುಕ್ಲತೀರ್ಥ ಬಳಿಯಲ್ಲಿ ಗುರುತಿಸಲಾದ 3.5 ಎಕ್ರೆ ಕಂದಾಯ ಭೂಮಿಯನ್ನು ದೇವಸ್ಥಾನಕ್ಕೆ ನೀಡುವ ಕುರಿತು ಕಂದಾಯ ಇಲಾಖೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದರು.

ಕ್ಷೇತ್ರದ ಸ್ವಚ್ಚತೆ ಹಾಗೂ ಇತರ ಮೂಲಭೂತ ಕಾರ್ಯಗಳ ಅನುಕೂಲ ಕ್ಕಾಗಿ ಹೊರಗುತ್ತಿಗೆ ನೌಕರರ ನೇಮಕಾತಿಗೆ ಅನುಮತಿ ನೀಡಬೇಕು. ಆನೆ ಬಾಗಿಲಿನಲ್ಲಿ ಶಿಲಾಮಯ ಸ್ವಾಗತ ಕಮಾನು ನಿರ್ಮಾಣ ಯೋಜನೆ ಇದೆ. 2 ಕೋಟಿ ರೂ. ವೆಚ್ಚದಲ್ಲಿ ಲಲಿತಾಂಬಿಕಾ ವಸತಿಗೃಹದ ನವೀಕರಣ, ವಿದ್ಯಾರ್ಥಿಗಳ ಹಾಸ್ಟೆಲ್ ಅಭಿವೃದ್ಧಿ ಹಾಗೂ ಸ್ವರ್ಣಮುಖಿ ಮಂಟಪದ ನವೀಕರಣ ಗುರಿಗಳನ್ನು ಇರಿಸಿಕೊಳ್ಳಲಾಗಿದೆ ಎಂದು ಬಾಬು ಶೆಟ್ಟಿ ವಿವರಿಸಿದರು.

ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್, ಕೆ.ಸುಧಾ ಬೈಂದೂರು, ಮಾಜಿ ಸಚಿವ ಅಭಯಚಂದ್ರ ಜೈನ್, ಮಂಗಳೂರು ಮಹಾನಗರಪಾಲಿಕೆ ಮಾಜಿ ಮೇಯರ್ ಭಾಸ್ಕರ್ ಮೊಯಿಲಿ, ರಾಜ್ಯ ಧಾರ್ಮಿಕ ಪರಿಷತ್‌ನ ಮಲ್ಲಿಕಾ ಪಕ್ಕಳಾ ಬಂಟ್ವಾಳ, ಉದ್ಯಮಿ ಶಂಕರ ಶೆಟ್ಟಿ ಬೆಂಗಳೂರು, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ ಕುಮಾರ ಶೆಟ್ಟಿ ಮುನಿಯಾಲ್, ಪ್ರಸಾದ್‌ರಾಜ್ ಕಾಂಚನ್, ರಾಜು ಎಸ್ ಪೂಜಾರಿ ಬೈಂದೂರು, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು, ಅರವಿಂದ್ ಪೂಜಾರಿ, ಕಿರಣ್ ಹೆಗ್ಡೆ ಅಂಪಾರು, ಮೋಹನ್ ಪೂಜಾರಿ ಉಪ್ಪುಂದ, ಅಣ್ಣಪ್ಪ ಶೆಟ್ಟಿ ಕಾಲ್ತೋಡು, ಜಗದೀಶ್ ದೇವಾಡಿಗ ಇದ್ದರು.

‘ರಾಜ್ಯದ ಪ್ರಸಿದ್ಧ ದೇವಸ್ಥಾನಗಳಾದ ಮಲೆಮಹದೇಶ್ವರ ಬೆಟ್ಟ, ಮೈಸೂರಿನ ಚಾಮುಂಡೇಶ್ವರಿ, ರೇಣುಕಾ ಎಲ್ಲಮ್ಮ, ಹುಲಿಯಮ್ಮ ದೇವಸ್ಥಾನ, ಘಾಟಿ ಸುಬ್ರಮಣ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕೊಲ್ಲೂರು ಹಾಗೂ ಕುಕ್ಕೆ ಸುಬ್ರಮಣ್ಯ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವ ಕುರಿತು ಪರಿಶೀಲಿಸಲಾಗುವುದುʼ.

-ರಾಮಲಿಂಗಾರೆಡ್ಡಿ, ಮುಜರಾಯಿ ಖಾತೆ ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News