×
Ad

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ: ರೈತರ ವಂಚನೆಗೆ ಉಡುಪಿ ಜಿಲ್ಲಾ ಭಾಕಿಸಂ ಆಕ್ಷೇಪ

Update: 2025-06-25 20:39 IST

ಉಡುಪಿ, ಜೂ.25: ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ರೈತರ ಪಾಲಿಗೆ ಒಂದು ಉತ್ತಮ ವೈಜ್ಞಾನಿಕ ವಿಮಾ ಯೋಜನೆ ಯಾಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ರೈತರನ್ನು ವಂಚಿಸುವ ಪ್ರಯತ್ನ ವೊಂದು ಈ ಯೋಜನೆಯಲ್ಲಿ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಹೇಳಿಕೆಯೊಂದರ ಮೂಲಕ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ.

2016ರಿಂದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಈ ವಿಮಾ ಯೋಜನೆ ಯನ್ನು ಅಳವಡಿಸಲಾಗಿದೆ. ಗ್ರಾಮವಾರು ಮಳೆಯ ಪ್ರಮಾಣಕ್ಕನುಗುಣವಾಗಿ ಪರಿಹಾರ ನೀಡುವ ಮೂಲಕ ರೈತರ ಪಾಲಿಗೆ ಒಂದು ಉಪಯುಕ್ತ ವಿಮಾ ಯೋಜನೆಯಾಗಿದೆ ಎಂದು ಭಾಕಿಸಂ ಹೇಳಿಕೆಯಲ್ಲಿ ತಿಳಿಸಿದೆ.

ಅಡಿಕೆ ತೋಟಕ್ಕೆ ಪ್ರತೀ ಹೆಕ್ಟೇರ್‌ಗೆ ರೂ.1,28,000 ಗರಿಷ್ಟ ಪರಿಹಾರ ಮೊತ್ತವಾಗಿದ್ದು, ಅದರಲ್ಲಿ ಶೇ.5ರಷ್ಟು ಅಂದರೆ ರೂ. 6,400 ಪ್ರೀಮಿಯಂ ಹಣವಾಗಿ ರೈತರು ಪಾವತಿಸಬೇಕು. ವಿಮಾ ಕಂಪನಿ ಗಳನ್ನು ಬಿಡ್ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಇದಾಗಿದ್ದು, ನಿಗದಿಗೊಳಿಸುವ ಪ್ರೀಮಿಯಂ ಹಣದಲ್ಲಿ ರೈತರ ಪಾವತಿಯನ್ನು ಕಳೆದು ಕಡಿಮೆಯಾದದ್ದನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳೆ ಬರಿಸಿ ಕೊಡುತ್ತವೆ.

ಅದೇ ರೀತಿ ಕಾಳುಮೆಣಸು ಬೆಳೆಗೂ ಕೂಡ ಹೆಕ್ಟೇರ್‌ಗೆ ರೂ. 47,000 ಗರಿಷ್ಟ ಪರಿಹಾರದ ಮೊತ್ತ ಆಗಿದ್ದು, ಅದರಲ್ಲಿ ರೈತರು ರೂ. 2,350 ಪಾವತಿ ಮಾಡಬೇಕಾಗಿದೆ. ಇದರಲ್ಲಿ ರಾಜ್ಯ ಸರಕಾರ ತನ್ನ ಮೇಲಿನ ಹೊರೆಯನ್ನು ಪಾವತಿಸಲು ನಿರಾಸಕ್ತಿ ಹೊಂದಿದ್ದು, ರೈತರು ಈ ವಿಮಾ ಯೋಜನೆಯಿಂದ ಹೊರಗುಳಿಯುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಅಧಿಕಾರಿ ವಲಯದಲ್ಲಿ ಕೇಳಿ ಬರುತ್ತಿದೆ ಎಂದು ಭಾಕಿಸಂ ಹೇಳಿದೆ.

ಮೊದಲು ವಿಮಾ ಪ್ರೀಮಿಯಂ ಪಾವತಿಗೆ ಸರಕಾರ 15 ರಿಂದ 20 ದಿನಗಳ ಕಾಲಾವಕಾಶ ನೀಡಿ ಪ್ರಚಾರ ನೀಡುತ್ತಿದ್ದು, ಈಗ ಬರಬರುತ್ತಾ ಕಳೆದೆರಡು ವರ್ಷಗಳಿಂದ ಕೇವಲ ನಾಲ್ಕೈದು ದಿನ ಅವಕಾಶ ನೀಡಿ ಪ್ರೀಮಿಯಂ ಪಾವತಿಸಲು ತಿಳಿಸುತ್ತಿದೆ. ಮೊದಲೇ ಅಡಿಕೆ ಮರಕ್ಕೆ ಬೋರ್ಡೊ ದ್ರಾವಣ ಸಿಂಪಡಣೆ, ಭತ್ತದ ನಾಟಿ ಕಾರ್ಯದಲ್ಲಿ ಮಗ್ನರಾಗಿರುವ ರೈತರಿಗೆ ತರಾತುರಿಯಲ್ಲಿ ಹಣ ಹೊಂದಿಸಿ, ದಾಲೆಗಳನ್ನು ನೀಡಿ, ಪ್ರೀಮಿಯಂ ಹಣ ಪಾವತಿಸುವುದು ಕಷ್ಟವಾಗುತ್ತಿರುವ ಕಾರಣ, ಅನೇಕರು ಈ ವಿಮಾ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ಸರಕಾರ ಮತ್ತು ಇಲಾಖೆಯ ಈ ಪ್ರಯತ್ನವನ್ನು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬಲವಾಗಿ ಆಕ್ಷೇಪಿಸುತ್ತದೆ. ಹಾಗೂ ಸಮಯಾವಕಾಶವನ್ನು ವಿಸ್ತರಿಸುವ ಬಗ್ಗೆ ತೋಟಗಾರಿಕಾ ಇಲಾಖೆಯ ನಿರ್ದೇಶ ಕರು ಸೇರಿದಂತೆ ಜಿಲ್ಲಾಡಳಿತ, ಜಿಲ್ಲೆಯ ಸಂಸದರು, ಶಾಸಕರುಗಳಿಗೂ ಪತ್ರ ಬರೆದು ಮನವಿ ಮಾಡಿದೆ ಎಂದು ಭಾಕಿಸಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News