ದೇವನಹಳ್ಳಿ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕುಂದಾಪುರ, ಜೂ.27: ದೇವನಹಳ್ಳಿಯಲ್ಲಿ ಪ್ರತಿಭಟನಾನಿರತ ರೈತರು, ರೈತ ಕಾರ್ಮಿಕ ಮುಖಂಡರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಕುಂದಾಪುರ ತಾಲುಕು ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡರಾದ ಎಚ್. ನರಸಿಂಹ, ಅಧಿಕಾರಕ್ಕೇರುವ ಮುನ್ನ ರೈತರ ಹೋರಾಟ ಬೆಂಬಲಿಸಿ ಭರವಸೆ ನೀಡಿದ ಸಿದ್ದರಾಮಯ್ಯ ಇದೀಗ ಕಾರ್ಪೊರೇಟ್ ಕಂಪನಿಗಳ ಪರ ವಹಿಸಿದ್ದಾರೆ. ಆ ಮೂಲಕ ಅವರು ರೈತರಿಗೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿದರು.
ಪಕ್ಷದ ತಾಲುಕು ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ದೇಶದಾದ್ಯಂತ ಸಿಪಿಎಂ ಜನರ ಸಮಸ್ಯೆ ಗಳನ್ನು ಪರಿಹರಿಸಲು ದೇಶದಾದ್ಯಂತ ಪ್ರಚಾರಾಂದೋಲನ ನಡೆಸುತ್ತಿದೆ. ಕೇಂದ್ರ ಸರಕಾರದ ಕಾರ್ಪೋರೇಟ್ ಪರವಾದ ನೀತಿಗಳು ಬೆಲೆ ಏರಿಕೆ, ನಿರುದ್ಯೋಗ ವ್ಯಾಪಕಗೊಳ್ಳುತ್ತಿದೆ. ಈ ನೀತಿಗಳು ಗ್ರಾಮೀಣ, ನಗರಗಳ ಅಭಿವೃದ್ಧಿಗಳ ಹಾಗೂ ಜನಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ತಾಲೂಕಿನ ಸರ್ವತೋಮುಖ ಅಭಿವೃದ್ದಿ ದೃಷ್ಟಿಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬಸ್ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಮಹಿಳೆಯರು, ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ದೊರೆಯುವಂತಾ ಗಬೇಕು. ಕುಂದಾಪುರ ದಿಂದ ಬೆಂಗಳೂರಿಗೆ ಹೆಚ್ಚುವರಿ ರೈಲು ಓಡಿಸಲು, ಎಲ್ಲ ಗ್ರಾಮದಲ್ಲೂ ಸುಸಜ್ಜಿತ ಆರೋಗ್ಯ ಕೇಂದ್ರ ತೆರೆಯಲು, ತಾಲೂಕಿನಾದ್ಯಂತ ಸರಕಾರಿ ಪಿಯುಸಿ, ಪದವಿ, ಡಿಪ್ಲೊಮಾ ಕಾಲೇಜು ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಖಾಸಗಿ ಬಸ್, ಖಾಸಗಿ ಆಸ್ಪತ್ರೆ ಗಳ, ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿ ತಡೆಯಬೇಕಾಗಿದೆ. ಪುರಸಭೆಯ ಒಳಚರಂಡಿ ಯೋಜನೆ ಶೀಘ್ರ ಪೂರ್ಣ ಗೊಳಿಸಲು ಹಾಗು ಪುರಸಭೆ ನಲ್ಲಿ ನೀರಿನ ನಿರ್ವಹಣೆ ಪುರಸಭೆಯೇ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಸುರೇಂದ್ರ, ಚಿಕ್ಕ ಮೊಗವೀರ, ರವಿ ವಿ.ಎಂ., ಲಕ್ಷಣ ಡಿ., ಪ್ರಕಾಶ್ ಕೋಣಿ, ಚಂದ್ರ ಪೂಜಾರಿ, ಹಿರಿಯ ಮುಖಂಡರಾದ ಕೆ. ಶಂಕರ್, ಮಹಾಬಲ ವಡೇರಹೋಬಳಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಸುರೇಂದ್ರ ಎಚ್. ವಂದಿಸಿದರು.