×
Ad

ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಸಮುದಾಯ ಕಟ್ಟುವ ಕಾರ್ಯ: ಬಿಷಪ್ ಜೆರಾಲ್ಡ್ ಲೋಬೊ

Update: 2025-06-28 17:36 IST

ಉಡುಪಿ: ಕ್ರೈಸ್ತ ಅಭಿವೃದ್ಧಿ ನಿಗಮ ಕಟ್ಟಡಗಳಿಗೆ ಅನುದಾನ ನೀಡುವುದರೊಂದಿಗೆ ಕ್ರೈಸ್ತ ಸಮುದಾಯ ವನ್ನು ಕಟ್ಟುವ ಕೆಲಸಕ್ಕೆ ಸೂಕ್ತ ಕಾರ್ಯ ಯೋಜನೆ ಹಾಕಿ ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಿದ್ದು ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸಮಾಲೋಚನೆ ನಡೆಸಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಕ್ರೈಸ್ತ ಅಭಿವೃದ್ಧಿ ನಿಗಮದ ವತಿಯಿಂದ ಉಡುಪಿ ಶೋಕಮಾತಾ ದೇವಾಲಯದ ಆವೆ ಮರಿಯಾ ಸಭಾಂಗಣದಲ್ಲಿ ನಡೆದ ಸಮುದಾಯದ ವಿವಿಧ ಸಭೆಗಳ ನಾಯಕರನ್ನು ಒಳಗೊಂಡ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಈ ಬಾರಿ ಅಭಿವೃದ್ಧಿ ನಿಗಮಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಮೊದಲ ಹಂತದಲ್ಲಿ 80 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದು ಇದು ಸಮುದಾಯದ ಜನರ ಯೋಜನಗಳಿಗೆ ನೇರವಾಗಿ ತಲುಪುವುದರೊಂದಿಗೆ ಬಡವರಿಗೆ ಇದರಿಂದ ಪ್ರಯೋಜನವಾಗಬೇಕು ಎಂಬುದು ಅವರ ಉದ್ದೇಶ ವಾಗಿದೆ. ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ನಿಗಮ ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ನಿಗಮದ ಉದ್ದೇಶವನ್ನು ಸೂಕ್ತವಾಗಿ ಈಡೇರಿಸಲು ವ್ಯವಸ್ಥಿತವಾದ ಕಾರ್ಯಯೋಜನೆ ಹಾಕುವುದರ ಮೂಲಕ ಯಶಸ್ಸು ಪಡೆಯುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದು ಅವರು ತಿಳಿಸಿದರು.

ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ನುಡಿದಂತೆ ನಡೆಯುವ ಸರಕಾರವಾಗಿದ್ದು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕ್ರೈಸ್ತ ಅಭಿವೃದ್ಧಿ ನಿಗಮ ವನ್ನು ಸ್ಥಾಪನೆ ಮಾಡಿದ್ದಾರೆ. ಕ್ರೈಸ್ತ ಸಮುದಾಯಕ್ಕೆ ಸೀಮಿತವಾಗಿ ಜನಪರ ಯೋಜನೆಗಳನ್ನು ರೂಪಿ ಸುವ ಕಾರ್ಯ ಪ್ರಗತಿಯಲ್ಲಿದ್ದು ಸಮುದಾಯದ ಸಲಹೆಗಳನ್ನು ಪಡೆದುಕೊಂಡು ಯೋಜನೆಗಳನ್ನು ಮಾಡಲಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ನನಗೆ 12 ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದ್ದು ಅಲ್ಲಿಗೆ ಪ್ರವಾಸ ಮಾಡಿ ಸಮುದಾಯದ ಸಲಹೆಗಳನ್ನು ಪಡೆಯುತ್ತಿದ್ದು ಜುಲೈ ೩ ರಂದು ಬೆಂಗಳೂರಿನಲ್ಲಿ ನಿಗಮದ ಸಭೆ ನಡೆಯಲಿದ್ದು ಅಲ್ಲಿ ಸಲಹೆಗಳನ್ನು ಪ್ರಸ್ತುತಪಡಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಅಧಿಕಾರಿ ಪೂರ್ಣಿಮಾ ಚೂರಿ ಸಮುದಾಯಕ್ಕೆ ಲಭ್ಯವಿರುವ ಯೋಜನೆ ಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಸಿಎಸ್‌ಐ ಸಭೆಯ ವಂ.ಐವನ್ ಸೋನ್ಸ್, ಯುಬಿಎಂಸಿ ಸಭೆಯ ವಂ.ಸಂತೋಷ್, ಸೀರಿಯನ್ ಓರ್ಥೊಡೊಕ್ಸ್ ಸಭೆಯ ವಂ.ನೊಯೆಲ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ರೊನಾಲ್ಡ್ ಡಿಆಲ್ಮೇಡಾ, ಸುಗಮ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಿಲ್ವೀಯಾ ಸುವಾರಿಸ್ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಸ್ವಾಗತಿಸಿದರು. ಉಡುಪಿ ಶೋಕಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ.ಲಿಯೋ ಪ್ರವೀಣ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News