ಕುಂಜಾಲು ಮುಖ್ಯರಸ್ತೆಯಲ್ಲಿ ದನದ ರುಂಡ ಪತ್ತೆ: ಪೊಲೀಸರಿಂದ ತನಿಖೆ
ಬ್ರಹ್ಮಾವರ, ಜೂ.29: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ 11.30ರ ಸಮಾರಿಗೆ ಗೋವಿನ ರುಂಡ ಹಾಗೂ ದೇಹದ ಭಾಗಗಳು ಪತ್ತೆಯಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದು, ಈವರೆಗೆ ಆರೋಪಿಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀದ್ದು, ಈ ಘಟನೆ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಮೂಡಿದ್ದು, ಪೊಲೀಸ್ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕೂಲಂಕಷ ತನಿಖೆ ನಡೆಸಬೇಕು ಎಂದು ಶಾಸಕರು ಆಗ್ರಹಿಸಿದರು.
ಕುಂಜಾಲು ಮಸೀದಿಯಿಂದ ಮನವಿ: ಕುಂಜಾಲಿನ ಭಾಗದಲ್ಲಿ ಕಿಡಿಗೇಡಿ ಗಳು ಗೋವಿನ ಕಳೆಬರಹ ಗಳನ್ನು ರಸ್ತೆಗೆ ಎಸೆದಿರುವುದು ಖಂಡನೀಯ. ಈ ಭಾಗದಲ್ಲಿ ಇರುವ ಅನೋನ್ಯತೆ ಸಹೋದರತೆಯನ್ನು ಮತ್ತು ಶಾಂತಿಯನ್ನು ಕದಡಲು ಈ ರೀತಿ ಮಾಡುತ್ತಿರುವ ಬಗ್ಗೆ ಅನುಮಾನ ಮೂಡುತಿದೆ. ಇಂತಹ ಘಟನೆ ಮರುಕಳಿಸದಂತೆ ಮಾಡಲು ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಕುಂಜಾಲು ನೂರ್ ಜುಮ್ಮಾ ಮಸೀದಿ ಸಮಿತಿ ಆಗ್ರಹಿಸಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ ಸಮಿತಿ, ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮರ ಆಳವಡಿಸಬೇಕು. ಈ ಬಗ್ಗೆ ಯಾವುದೇ ರಾಜಕೀಯ ಯಾವುದೇ ಸಂಘಟನೆಗಳ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಗಳನ್ನು ಶಿಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಮುಹಮ್ಮದ್ ಶಬೀರ್, ಉಪಾದ್ಯಕ್ಷ ಸುಜಿದ್ ಖಾನ್, ಖಜಾಂಜಿ ಹಬೀಬ್ ಉಡುಪಿ, ಹಾತಿಂ ಸಾಹೇಬ್ ಕುಂಜಾಲ್ ಮೊದಲಾದವರು ಉಪಸ್ಥಿತರಿದ್ದರು.
24ಗಂಟೆಯೊಳಗೆ ಬಂಧಿಸಲು ಆಗ್ರಹ: ಕುಂಜಾಲು ರಾಮ ಮಂದಿರದಲ್ಲಿ ಹಿಂದುತ್ವ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿ ಅಮಾನುಷ ಕೃತ್ಯ ನಡೆಸಿದ ವ್ಯಕ್ತಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಗ್ರಾಮಾಂತರ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ಹಿಂದೂ ಸಂಘಟನೆಯ ಪ್ರಮುಖರಾದ ದಿನೇಶ್ ಮೆಂಡನ್, ಮಹೇಶ್ ಬೈಲೂರು, ರತ್ನಾಕರ ಅಮೀನ್, ಬಿಜೆಪಿ ಮುಖಂಡರಾದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ನಿಶಾನ್ ರೈ, ಗೌತಮ್ ಅಗ್ರಹಾರ, ಮನೋಜ್ ಕುಮಾರ್ ಶೆಟ್ಟಿ, ಗುರುರಾಜ್ ರಾವ್, ಗಣೇಶ್ ಕುಲಾಲ್, ಆದರ್ಶ ಶೆಟ್ಟಿ ಕೆಂಜೂರು, ಮಹೇಂದ್ರ ನೀಲಾವರ, ಹರೀಶ್ ಶೆಟ್ಟಿ ಚೇರ್ಕಾಡಿ, ಎಸ್. ನಾರಾಯಣ, ರಾಘವೇಂದ್ರ ಕುಂದರ್, ಧನಂಜಯ ಅಮೀನ್, ಸುನೀಲ್ ಕೊಕ್ಕರ್ಣೆ, ಅಕ್ಷೇಂದ್ರ, ರಮಾನಂದ ಶೆಟ್ಟಿ ಕೆಂಜೂರು, ಉಮೇಶ್ ನಾಯ್ಕ್, ಸುರೇಶ್ ಪೇತ್ರಿ, ದೇವಾನಂದ, ಶ್ರೀಮತಿ ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಆಗ್ರಹ: ಕುಂಜಾಲುವಿನ ಪ್ರಕರಣ ಕೋಮು ಸೌಹಾರ್ದವನ್ನು ಹಾಳುಮಾಡಲು ಎಸಗಿದ ದುಷ್ಕೃತ್ಯವಾಗಿರಬೇಕು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟ ವಾದ ಸುನ್ನೀ ಕೋ-ಓರ್ಡಿನೇಶನ್ ಸಮಿತಿ ಆಗ್ರಹಿಸಿದೆ.
ಬ್ರಹ್ಮಾವರ ಸಮೀಪದ ಕುಂಜಾಲುವಿನಲ್ಲಿ ಗೋವಿನ ರುಂಡವನ್ನು ಕತ್ತರಿಸಿ ವಿಕೃತಿ ಮೆರೆದಿದ್ದು, ಈ ಕೃತ್ಯ ವನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ. ಪೋಲಿಸ್ ಇಲಾಖೆ ಈ ಘಟನೆಯನ್ನು ಗಂಬೀರವಾಗಿ ಪರಿಗಣಿಸಿ ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಬ್ರಹ್ಮಾವರ ಚಲೋ ಪ್ರತಿಭಟನೆ ಯನ್ನು ಜಿಲ್ಲಾಡಳಿತ ಎದುರಿಸಬೇಕಾದಿತು ಎಂದು ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕುಂಜಾಲು ಕೃತ್ಯವನ್ನು ಖಂಡಿಸಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬ್ರಹ್ಮಾವರ ಘಟಕ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದೆ.
ಅಶಾಂತಿ ಸೃಷ್ಟಿಸಲು ಕೋಮು ಸಂಘರ್ಷಕ್ಕೆ ಕಾರಣವಾಗುವ ಇಂತಹ ಹೇಯ ಕೃತ್ಯವನ್ನು ದುಷ್ಕರ್ಮಿ ಗಳು ಮಾಡಿರಬಹುದು. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆಯನ್ನು ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಒಕ್ಕೂಟ ಆಗ್ರಹಿಸಿದೆ.
ಕುಂಜಾಲು ಪ್ರದೇಶದಲ್ಲಿ ದನದ ರುಂಡ ಪತ್ತೆಯಾದ ಘಟನೆಯು ತೀವ್ರ ವಿಷಾದನೀಯವಾಗಿದ್ದು ಪೊಲೀಸ್ ಇಲಾಖೆ ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಬೇಕು ಹಾಗೂ ಈ ಘಟನೆಯಿಂದ ಕೋಮು ಸೌಹಾರ್ದತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.