×
Ad

ಬ್ರಹ್ಮಾವರ | ದನದ ತಲೆ ಬುರುಡೆ ಪತ್ತೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

Update: 2025-06-30 17:06 IST

ಉಡುಪಿ, ಜೂ.30: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಮುಖ್ಯರಸ್ತೆಯಲ್ಲಿ ದನದ ತಲೆ ಹಾಗೂ ಇತರ ಭಾಗ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಈ ಕುರಿತು ಮಾಹಿತಿ ನೀಡಿದರು.

ಕುಂಜಾಲು ನಿವಾಸಿಗಳಾದ ರಾಮ(49), ಪ್ರಸಾದ್(21), ಸಂದೇಶ(35), ರಾಜೇಶ್(28), ಮಟಪಾಡಿಯ ನವೀನ್(35), ಕುಂಜಾಲು ಅಡ್ಜಿಲ ನಿವಾಸಿ ಕೇಶವ ನಾಯ್ಕ್(50) ಬಂಧಿತ ಆರೋಪಿ ಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಸ ಲಾಗುತ್ತಿದೆ ಎಂದರು.

ಆರೂರು ಗ್ರಾಮದ ಕುಂಜಾಲ್ ಜಂಕ್ಷನ್ ಬಳಿ ರಾತ್ರಿ ರಿಕ್ಷಾ ನಿಲ್ದಾಣದ ಎದುರು ರಸ್ತೆ ಮಧ್ಯೆ ಜೂ.28ರಂದು ರಾತ್ರಿ 11:30 ಗಂಟೆಗೆ ಅಪರಿಚಿತರು ಗೋವಿನ ತಲೆ ಮತ್ತು ಚರ್ಮದ ಭಾಗವನ್ನು ರಸ್ತೆಯಲ್ಲಿ ಹಾಕಿರು ವುದು ಪತ್ತೆಯಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾಲ್ಕು ತಂಡಗಳ ರಚನೆ: ಕರಾವಳಿಯಲ್ಲಿ ಕೋಮು ಸಂಬಂಧಪಟ್ಟಂತೆ ಸೂಕ್ಷ್ಮತೆ ಸಾಕಷ್ಟು ಇರುವುದ ರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣದ ಪತ್ತೆಗಾಗಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಅಶೋಕ್, ಸುದರ್ಶನ, ಪುನೀತ್ ಹಾಗೂ ಪ್ರಸನ್ನ ಅವರ ಒಟ್ಟು ನಾಲ್ಕು ತಂಡಗಳನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಲಾಯಿತು ಎಂದು ಎಸ್ಪಿ ತಿಳಿಸಿದರು.

ಈ ಪ್ರಕರಣದ ಕೂಲಂಕೂಷವಾಗಿ ಪರಿಶೀಲಿಸಿ, 3-4ಕಿ.ಮೀ. ವ್ಯಾಪ್ತಿಯ ಹಲವು ಸಿಸಿಟಿವಿ ಹಾಗೂ ವಾಹನ ಗಳ ಚಲನೆಯ ಆಧಾರದ ಮೇಲೆ ತನಿಖೆ ನಡೆಸಿ, ಒಟ್ಟು ಆರು ಮಂದಿ ಆರೋಪಿಗಳನ್ನು ಗುರುತಿಸಿ ವಶಕ್ಕೆ ಪಡೆಯ ಲಾಗಿದೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ಕಾರನ್ನು ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸ್ ಕಸ್ಟಡಿಗೆ ಪಡೆದು ಕೊಂಡು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.

ಮಾಂಸಕ್ಕಾಗಿ ಸಾಗಾಟ: ಕೇಶವ ತನ್ನ ಮನೆಯಲ್ಲಿದ್ದ ದನವನ್ನು, ಸಾಕಾಲು ಆಗದೇ ರಾಮಣ್ಣ ಅವರಿಗೆ ತೆಗೆದುಕೊಂಡು ಹೋಗಿ ಮಾಂಸ ಮಾಡುವಂತೆ ನೀಡಿದ್ದನು. ಅದರಂತೆ ರಾಮಣ್ಣ ದನವನ್ನು ಸಂದೇಶನ ಕಾರಿನಲ್ಲಿ ಸಾಗಾಟ ಮಾಡಿದ್ದನು. ಬಳಿಕ ಅಲ್ಲೇ ಸಮೀಪದ ಹಾಡಿಯಲ್ಲಿ ಪ್ರಸಾದ್, ನವೀನ್, ರಾಮಣ್ಣ ಸೇರಿ ದನವನ್ನು ಕಡಿದು ಮಾಂಸ ಮಾಡಿದ್ದರು.

ಅದರ ಕಳೇಬರವನ್ನು ದೂರ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಲು ನಿರ್ಧರಿಸಿ, ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದರು. ದಾರಿ ಮಧ್ಯೆ ಅದರ ಕೆಲವು ಕಳೇಬರ ಸ್ಕೂಟರ್‌ನಿಂದ ಬಿತ್ತೆನ್ನಲಾಗಿದೆ. ಇದು ಅವರ ಗಮನಕ್ಕೆ ಬಂದಿಲ್ಲ. ಮನೆಗೆ ಹೋಗಿ ಮರುದಿನ ವಿವಾದ ಆಗಿರುವ ವಿಚಾರ ತಿಳಿದು ಇವರು ಮಾಂಸವನ್ನು ವಿಲೇವಾರಿ ಮಾಡಲು ಯತ್ನಿಸಿದ್ದರು ಎಂದು ಎಸ್ಪಿ ತಿಳಿಸಿದರು.

ಆರೋಪಿಗಳು ಚಾಲಕರು, ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ದನವನ್ನು ತಿನ್ನುವುದಕ್ಕಾಗಿಯೇ ಮಾಂಸ ಮಾಡಿದ್ದರು. ಈ ಎಲ್ಲ ಆರೋಪಿಗಳಿಗೆ ಯಾವುದೇ ಅಪರಾಧ ಹಿನ್ನೆಲೆಯಲ್ಲಿ ಮತ್ತು ಇವರ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲ. ಇವರು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

‘ಈ ಪ್ರಕರಣ ನಡೆದ ಕೂಡಲೇ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಚಾರ ಮಾಡುತ್ತಿದ್ದರು. ಪೊಲೀಸರು ತನಿಖೆ ಮಾಡುವ ಮೊದಲೇ ಆರೋಪಿಗಳು ಯಾವ ಸಮುದಾಯದವರು, ಯಾರು ಮಾಡಿ ದ್ದರು ಎಂಬ ಬೇರೆ ಬೇರೆ ರೀತಿಯಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಪೊಲೀಸರು ಅವರ ಕರ್ತವ್ಯ ಮಾಡುತ್ತಾರೆ. ಹಾಗಾಗಿ ಇಂತಹ ಸೂಕ್ಷ್ಮ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಕೋಮು ಧ್ವೇಷ ಹರಡುವ ಕೆಲಸ ಮಾಡಬಾರದು. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಉಡುಪಿ ಜಿಲ್ಲೆಯ ಕೋಮು ಸೌಹಾರ್ದತೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ’

-ಹರಿರಾಮ್ ಶಂಕರ್, ಎಸ್ಪಿ ಉಡುಪಿ

ಪೊಲೀಸ್ ಇಲಾಖೆಗೆ ಅಭಿನಂದನೆ

ಕುಂಜಾಲು ದನದ ರುಂಡದ ಪತ್ತೆ ಪಕರಣವನ್ನು ಶೀಘ್ರವಾಗಿ ಬೇಧಿಸಿ ಆರೋಪಿಗಳನ್ನು ಬಂಧಿಸಿದ ಜಿಲ್ಲಾ ಪೊಲೀಸ್ ಇಲಾಖೆಗೆ ಉಡುಪಿ ಜಿಲ್ಲಾ ಮುಸ್ಲಿಂ ಜಮಾತ್ ಅಭಿನಂದನೆ ಸಲ್ಲಿಸಿದೆ.

ಸಮಾಜದಲ್ಲಿ ಸೌಹಾರ್ದತೆಯನ್ನು ಕೆಡಿಸುವ ಎಲ್ಲಾ ಲಕ್ಷಣಗಳಿರುವಾಗ ಉಡುಪಿ ಜಿಲ್ಲಾ ಎಸ್ ಪಿ ಮತ್ತು ಪೊಲೀಸ್ ಇಲಾಖೆ ಶೀಘ್ರಗತಿಯಲ್ಲಿ ತನಿಖೆಯನ್ನು ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ. ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡಿಕೊಳ್ಳಲು ಎಲ್ಲಾ ಸಮುದಾಯದ ಜನರು ಸಹಕರಿಸ ಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷ ಬಿಎಸ್‌ಎಫ್ ಮಹಮ್ಮದ್ ರಫೀಕ್ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಸುಬಾನ್ ಅಹಮದ್ ಹೊನ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News