×
Ad

ಇನ್ನಾ ಗ್ರಾಮ ಪಂಚಾಯತ್: ಗ್ಯಾರಂಟಿ ಅದಾಲತ್

Update: 2025-07-04 16:11 IST

ಪಡುಬಿದ್ರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಥಮ ಗ್ಯಾರಂಟಿ ಅದಾಲತ್" ಗುರುವಾರ ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು.

ಅದಾಲತ್ ಉದ್ಘಾಟಿಸಿ ಮಾತನಾಡಿದ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಗ್ಯಾರಂಟಿ ಅದಾಲತ್ ನಡೆಸುವುದರಿಂದ ಯೋಜನೆಯ ಅನುಷ್ಠಾನಕ್ಕೆ ಇನ್ನಷ್ಟು ವೇಗ ದೊರಕಿದಂತಾಗುತ್ತದೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾದ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನಡೆಯಿತು. ಈ ಯೋಜನೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೂ 250 ಕೋಟಿ ರೂ. ಅನುದಾನವು ಹರಿದು ಬರುತ್ತಿದ್ದು ಇದು ನೇರವಾಗಿ ಜನರ ಕೈ ಸೇರುತ್ತಿದೆ ಎಂದರು.

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ತಾಲೂಕು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಶಾಂತ್ ರಾವ್, ಉಡುಪಿ ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯ ದೀಪಕ್ ಕೋಟ್ಯಾನ್ ಇನ್ನಾ ಮಾತನಾಡಿದರು. ಗ್ರಾಮಸ್ಥರು, ಗ್ಯಾರಂಟಿ ಫಲಾನುಭವಿಗಳು, ಮಹಿಳೆಯರು ಭಾಗವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಪದಾಧಿಕಾರಿಗಳ, ತಾಲೂಕು ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ಯಾರಂಟಿ ಫಲಾನುಭವಿಗಳ ಕುಂದು ಕೊರತೆಗಳನ್ನು ಆಲಿಸಿದರು ಹಾಗೂ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆ, ಯುವನಿಧಿಗೆ ಸಂಬಂಧಿಸಿದ ಇಲಾಖೆ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ಗ್ಯಾರಂಟಿ ಅನುಷ್ಠಾನದ ವರದಿಗಳನ್ನು ವಾಚಿಸಿದರು. ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಿತಾ ಶೆಟ್ಟಿ, ಇನ್ನಾ ಮುದ್ದಾಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿವಾಕರ ಶೆಟ್ಟಿ, ಹಾಗೂ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.

ಇನ್ನಾ ಗ್ರಾಮ ಪಂಚಾಯತ್ ಸದಸ್ಯರಾದ ಕುಶ.ಆರ್. ಮೂಲ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News