×
Ad

ವೃತ್ತಿಮೇಳದ ಯುವ ಕಲಾವಿದರಿಗೆ ಮಾರ್ಗದರ್ಶಿ ಶಿಬಿರ ಮುಕ್ತಾಯ

Update: 2025-07-05 21:58 IST

ಉಡುಪಿ: ಯಕ್ಷಗಾನ ಕಲಾರಂಗದ ವತಿಯಿಂದ ಕರಾವಳಿಯ ವೃತ್ತಿ ಮೇಳದ ಯುವ ಯಕ್ಷಗಾನ ಕಲಾವಿ ದರಿಗೆ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಾಲ್ಕು ದಿನಗಳ ಕಲಾ ಆಯೋಜಿಸಿದ್ದ ಯಕ್ಷಗಾನ ಮಾರ್ಗದರ್ಶಿ ಸನಿವಾಸ ಶಿಬಿರ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.

ಮೂವತ್ತು ಮಂದಿ ಹಿರಿಯ-ಕಿರಿಯ ಕಲಾವಿದ ಶಿಬಿರಾರ್ಥಿಗಳು ಭಾಗವಹಿಸಿದ್ದ ಈ ಶಿಬಿರದಲ್ಲಿ ಕುಣಿತ, ಮಾತುಗಾರಿಕೆ ಸೇರಿದಂತೆ ಯಕ್ಷಗಾನ ಕಲೆಯ ವಿವಿಧ ವಿಷಯಗಳ ಕುರಿತು ಅನುಭವಿ ಹಿರಿಯ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಎಲ್ಲಾ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಇದೊಂದು ಅಪೂರ್ವ ಅನುಭವವಾಗಿ ನಮಗೆ ಉಪಯುಕ್ತ ಮಾಹಿತಿ ಒದಗಿಸಿದೆ. ಅನೇಕ ಹಿರಿಯ ಕಲಾವಿದರ, ಯಕ್ಷಗಾನ ವಿದ್ವಾಂಸರ, ಅಲ್ಲದೆ ನಾಟಕ, ನೃತ್ಯ, ಗಮಕ ಹೀಗೆ ಅನ್ಯ ಕಲಾ ಪ್ರಕಾರಗಳ ಹಲವು ಸಂಪನ್ಮೂಲ ವ್ಯಕ್ತಿಗಳಿಂದ ನಮಗೆ ಹಲವು ಹೊಸ ವಿಚಾರಗಳು ತಿಳಿದವು ಎಂದು ಶಿಬಿರಾರ್ಥಿಗಳು ತಿಳಿಸಿದರು.

ಡಾ.ಅನ್ನಪೂರ್ಣ ಆಚಾರ್ಯರು ನಡೆಸಿಕೊಟ್ಟ ಯೋಗ ತರಗತಿ, ಯೋಗದ ಕುರಿತು ಪ್ರಾಥಮಿಕ ಮಾಹಿತಿ ನೀಡಿತು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಶಿಬಿರದ ಪ್ರಾಯೋಜಕರೂ, ಸಂಸ್ಥೆಯ ಅಧ್ಯಕ್ಷರೂ ಆದ ಎಂ.ಗಂಗಾಧರ ರಾವ್, ಶಿಬಿರದ ನಿರ್ದೇಶಕರಾದ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಉಬರಡ್ಕ ಉಮೇಶ್ ಶೆಟ್ಟಿ, ಪವನ್ ಕಿರಣ್‌ಕೆರೆ, ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್ ಅಲ್ಲದೆ ಗಣ್ಯರಾದ ಡಾ.ಎ.ಪಿ. ಭಟ್, ಡಾ.ಎಂ. ಆರ್. ಹೆಗಡೆ, ಪಣಂಬೂರು ವಾಸುದೇವ ಐತಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News