×
Ad

ಅಕ್ರಮ ಸಂಪತ್ತಿನಿಂದ ಜೀವನದಲ್ಲಿ ತೃಪ್ತಿ ಇಲ್ಲ: ಸಂತೋಷ ಹೆಗ್ಡೆ

Update: 2025-07-11 18:03 IST

ಕಾರ್ಕಳ: ತಪ್ಪು ದಾರಿಯಲ್ಲಿ ಸಂಪಾದಿಸಿದ ಸಂಪತ್ತಿನಿಂದ ಶ್ರೀಮಂತಿಕೆಯ ಜೀವನದಲ್ಲಿ ಎಂದಿಗೂ ಶಾಂತಿ ನೀಡುವುದಿಲ್ಲ. ನಾವು ಅತೀ ಶ್ರೀಮಂತರಾಗುವುದು, ದೊಡ್ಡ ವ್ಯಕ್ತಿಯಾಗುವುದು, ದೊಡ್ಡ ಹುದ್ದೆಗೆ ಹೋಗುವುದು ತಪ್ಪಲ್ಲ, ಆದರೆ ಎಲ್ಲಿಯೂ ಕಾನೂನಿನ ಚೌಕಟ್ಟು ಮೀರಬಾರದು. ಅಕ್ರಮ ಸಂಪತ್ತು ಮಾಡಿದವರು ಇಂದು ಕಾನೂನಿನ ಭಯದಿಂದ ನೆಮ್ಮದಿ ಇಲ್ಲದ ಜೀವನ ನಡೆಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಹೇಳಿದರು.

ಅವರು ಶುಕ್ರವಾರ ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಗೌರವ ಸ್ವೀಕರಿಸಿ ಮಾತನಾಡಿದರು.

ಪತ್ರಿಕೆ ಮಾಧ್ಯಮಗಳು ನಮ್ಮ ನಿತ್ಯ ಜೀವನದ ಮುಖ್ಯ ಭಾಗವಾಗಿದೆ ಎಂದ ಸಂತೋಷ ಹೆಗ್ಡೆ ತೃಪ್ತಿ ಹಾಗೂ ಮಾನವೀಯತೆ ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ಯಾವುದೇ ಹುದ್ದೆಗೆ ಹೋದರೂ ಅದರ ಮಹತ್ವವನ್ನು ತಿಳಿದು ಕೆಲಸ ಮಾಡಿ ನ್ಯಾಯ ನೀಡಬೇಕು, ಮಾನವೀಯತೆಯಲ್ಲಿ ಜನಸೇವಕರಾಗಿ ಕೆಲಸ ಮಾಡಬೇಕು. ಮಾನವನಾಗಲು ಮಾನವೀಯತೆ ಇರಬೇಕು. ಮುಂದೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕಾದರೆ ವಿದ್ಯಾರ್ಥಿಗಳು ಇಂದಿನಿಂದಲೇ ಎಚ್ಚರಗೊಳ್ಳಬೇಕೆಂದರು.

ಹೆಬ್ರಿ ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಮಾತನಾಡಿ ನಾವು ಮಾಡಿದ ಎಲ್ಲಾ ಒಳ್ಳೆ ಕೆಲಸಗಳನ್ನು ಸಮಾಜಕ್ಕೆ ಬಿತ್ತರಿಸುವ ಒಳ್ಳೆಯ ಕೆಲಸ ಮಾಧ್ಯಮದಿಂದ ಆಗಿದೆ. ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬಾರಿ ಪ್ರಮಾಣದ ಬದಲಾವಣೆ ಕಂಡುಕೊಂಡಿದ್ದೇವೆ. ಹೆಬ್ರಿಯ ಪತ್ರಕರ್ತರ ಮಕ್ಕಳಿಗೆ ಮುಂದಿನ ದಿನಗಳಲ್ಲಿ ವಿಶೇಷ ರಿಯಾಯಿತಿಯಲ್ಲಿ ಸೀಟು ನಮ್ಮ ಸಂಸ್ಥೆ ನೀಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲ್ ವಹಿಸಿ ಮಾತನಾಡಿ, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರು ಮಾಡಿದ ಕೆಲಸಗಳು ಸಮಾಜಕ್ಕೆ ಮಾದರಿಯಾಗಿ ದಾರಿ ತೋರಿದೆ ಎಂದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ, ಹೆಬ್ರಿ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ದಂಪತಿ, ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜೇಶ ಶೆಟ್ಟಿ ಅಲೆವೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಹಮ್ಮದ್ ಶರೀಫ್ ಕಾರ್ಕಳ, ಹೆಬ್ರಿ ತುಳಸಿ ಗ್ರೂಪ್ಸ್ ಉದ್ಯಮ ಸಮೂಹದ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಉಪ ಪ್ರಾಂಶುಪಾಲ ದೀಪಕ್ ಎನ್, ಅವರನ್ನು ಗೌರವಿಸಲಾಯಿತು.

ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರ ವರ್ಣಚಿತ್ರ ರಚಿಸಿ ಅವರಿಗೆ ಹಸ್ತಾಂತರಿಸಿದ ಹೆಬ್ರಿ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪರೀಕ್ಷಿತ್‌ ಆಚಾರ್‌ ಅವರನ್ನು ಗೌರವಿಸಲಾಯಿತು.

ಧಾರ್ಮಿಕ ಮಂದಾಳು ಹೆಬ್ರಿ ಭಾಸ್ಕರ್ ಜೋಯಿಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಹಮ್ಮದ್ ಶರೀಫ್ ಕಾರ್ಕಳ, ಹೆಬ್ರಿ ತುಳಸಿ ಗ್ರೂಪ್ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್, ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಉದಯ ಕುಮಾರ್‌ ಶೆಟ್ಟಿ, ಸುಮಲತಾ ಹೆಬ್ಬಾರ್‌, ಸಂಜೀವ ಆರ್ಡಿ, ಶ್ರೀದತ್ತಾ ಶೆಟ್ಟಿ, ರಂಜಿತ್‌ ಶಿರ್ಲಾಲ್‌ ಉಪಸ್ಥಿತರಿದ್ದರು. ಪತ್ರಕರ್ತರಾದ ಉದಯ ಕುಮಾರ ಶೆಟ್ಟಿ ಸ್ವಾಗತಿಸಿದರು. ನರೇಂದ್ರ ಎಸ್. ಮರಸಣಿಗೆ ನಿರೂಪಿಸಿ, ವಂದಿಸಿದರು.









 


 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News