×
Ad

ಮದುವೆ ಮಾಡಿಸದಿದ್ದರೆ ಯುವಕನಿಗೆ ಗುಂಡು ಹೊಡೆಯುತ್ತೇನೆ: ಭೂಗತ ಆರೋಪಿ ಕಲಿ ಯೋಗೀಶ್‌ನಿಂದ ಬೆದರಿಕೆ ಕರೆ

Update: 2025-07-11 20:48 IST

ಬಿಜೆಪಿ ಮುಖಂಡನ ಪುತ್ರ, ಆರೋಪಿ ಶ್ರೀಕೃಷ್ಣ ಜೆ ರಾವ್

ಉಡುಪಿ, ಜು.11: ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಆರೋಪಿ ಶ್ರೀಕೃಷ್ಣ ಜೆ ರಾವ್ ಅನ್ಯಾಯಕ್ಕೆ ಒಳಗಾದ ಯುವತಿಯನ್ನು ಮದುವೆಯಾಗದಿದ್ದರೆ ನಾವೇ ಆತನಿಗೆ ಗುಂಡು ಹೊಡೆಯುತ್ತೇವೆ ಎಂದು ಭೂಗತ ಆರೋಪಿ ಕಲಿ ಯೋಗೀಶ್ ಎಂದು ಹೇಳಿಕೊಂಡು ಉಡುಪಿಯ ಖಾಸಗಿ ಸುದ್ದಿವಾಹಿನಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿರುವ ಬಗ್ಗೆ ವರದಿಯಾಗಿದೆ.

ವಿದೇಶದಿಂದ ಇಂಟರ್‌ನೆಟ್ ಕರೆ ಮಾಡಿದ ಆತ, ಬಿಜೆಪಿ ಮುಖಂಡನ ಮಗ ವಿಶ್ವಕರ್ಮ ಸಮುದಾಯದ ಯುವತಿಯನ್ನು ಗರ್ಭವತಿಯನ್ನಾಗಿಸಿ ಅನ್ಯಾಯ ಮಾಡಿರುವ ಬಗ್ಗೆ ನನಗೆ ದೂರು ಬಂದಿದೆ. ಈಗ ಆತ ಜೈಲಿನಲ್ಲಿದ್ದಾನೆ. ಬಿಜೆಪಿ, ಹಿಂದುತ್ವ ಸಂಘಟನೆಯ ಯಾರೂ ಕೂಡ ಯುವತಿಗೆ ಬೆಂಬಲ ನೀಡಿಲ್ಲ. ಆಕೆ ಹಿಂದು ಅಲ್ಲವೇ? ಆಕೆಯ ಬಳಿ ಹಣ ಇಲ್ಲದಂತೆ ಇವರು ಆಕೆಯನ್ನು ಬಿಟ್ಟುಬಿಟ್ಟಿರುವುದು ಸರಿಯಲ್ಲ ಎಂದು ತಿಳಿಸಿದ್ದಾನೆ.

ವಿಶ್ವಕರ್ಮ ಸಮುದಾಯ ಕೂಡ ಆಕೆಯ ಪರವಾಗಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಸುಮ್ಮನೆ ಕುಳಿತಿದೆ. ಈ ವಿಚಾರದಲ್ಲಿ ಹಿಂದುತ್ವ ಸಂಘಟನೆ ಹಾಗೂ ಬಿಜೆಪಿ ಮುಖಂಡರು ಮಾಡಿರುವುದು ತಪ್ಪು. ಇವರು ಬಡ ಕುಟುಂಬಗಳಿಗೆ ಅನ್ಯಾಯ ಆಗಿರುವಾಗ ಆಕೆಗೆ ಬೆಂಬಲವಾಗಿ ನಿಲ್ಲುವ ಬದಲು ಹಣ ಇರುವವರ ಪರವಾಗಿ ನಿಂತಿರುವುದು ಸರಿಯಲ್ಲ ಎಂದು ಕಲಿ ಯೋಗೀಶ್ ಹೇಳಿದ್ದಾನೆ ಎನ್ನಲಾಗಿದೆ.

ಎರಡು ಕಡೆಯವರು ಕುಳಿತು ಮಾತುಕತೆ ಮಾಡಿ ಅವರಿಬ್ಬರಿಗೆ ಮದುವೆ ಮಾಡಿಸಬೇಕು. ಈ ರೀತಿ ಅನ್ಯಾಯ ಮಾಡಿದ ಹುಡುಗನಿಗೆ ಮುಂದೆ ಯಾರು ಹೆಣ್ಣು ಕೊಡುತ್ತಾರೆ. ಇದನ್ನು ಇವರು ಅರ್ಥ ಮಾಡಬೇಕು. ಹಿಂದುತ್ವ ಸಂಘಟನೆ, ಬಿಜೆಪಿ ಮುಖಂಡರು, ಶಾಸಕರು, ಸಂಸದರು ಯುವತಿಯ ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಆತ ಹೊರಗಡೆ ಬಂದರೆ ನಾವೇ ಗುಂಡು ಹೊಡೆಯುತ್ತೇವೆ. ಅಂತವರು ಬದುಕುವುದೇ ಬೇಡ ಎಂದು ತಿಳಿಸಿರುವುದು ಆಡಿಯೋದಲ್ಲಿ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News