ಆನ್‌ಲೈನ್‌ನಲ್ಲಿ ಬೆದರಿಕೆ: ಮಹಿಳೆಯಿಂದ 65 ಲಕ್ಷ ರೂ. ವರ್ಗಾಯಿಸಿಕೊಂಡ ವಂಚಕರು
ಉಡುಪಿ, ಜು.19: ಮುಂಬಯಿ ಪೊಲೀಸ್ ಡಿಪಾರ್ಟ್‌ಮೆಂಟ್ ನಿಂದ ಎಂದು ಹೇಳಿ ವಾಟ್ಸಪ್ ಮೆಸೇಜ್, ವಿಡಿಯೋ ಕಾಲ್ ಮೂಲಕ ಉಡುಪಿಯ ಮಹಿಳೆಯೊಬ್ಬರನ್ನು ಬೆದರಿಸಿದ ಆನ್‌ಲೈನ್ ವಂಚಕರು ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ 65,00,000ರೂ. ಗಳನ್ನು ಬಲವಂತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ವರದಿಯಾಗಿದೆ.
ಉಡುಪಿಯ ಶೀಲಾ (66) ಎಂಬವರಿಗೆ ಜು.13ರಂದು ಮುಂಬಯಿಯ ಪೊಲೀಸ್ ಇಲಾಖೆಯಿಂದ ಎಂದು ವಾಟ್ಸಪ್ ಸಂದೇಶವೊಂದು ಬೆಳಗ್ಗೆ 10 ಗಂಟೆಗೆ ಬಂದಿದ್ದು, ನಂತರ ಅದೇ ನಂಬರ್‌ನಿಂದ ವಿಡಿಯೋ ಕಾಲ್ ಮಾಡಿದ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ, ತಾನು ಕೊಲಬಾ ಠಾಣೆಯ ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು ಮನೆಯಲ್ಲಿ ಆಕೆ ಒಬ್ಬಳೇ ಇರುವುದನ್ನು ಖಚಿತ ಪಡಿಸಿಕೊಂಡು, ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ 20 ಕೋಟಿ ರೂ. ಅಕ್ರಮ ಹಣ ಜಮಾ ಆಗಿದ್ದು ಕೇಸ್ ಆಗಿ ವಾರಂಟ್ ಹೊರಡಿಸಲಾಗಿದ್ದು ಮಂಗಳೂರು ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡಲು ಬರುತ್ತಿರುವುದಾಗಿ ಹೆದರಿಸಿದ್ದ.
ಇದರಿಂದ ಬೆದರಿದ ಆಕೆಯಿಂದ ಆಕೆಯ ಎಲ್ಲಾ ಬ್ಯಾಂಕ್‌ಗಳ ಅಕೌಂಟ್ ವಿವರ ಪಡೆದು ಅವುಗಳ ಪೋಟೊ ತೆಗೆಸಿಕೊಂಡು, ಕೇಸ್‌ನಿಂದ ಹೊರಬರಲು ನಾವು ಹೇಳಿದ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವಂತೆ ತಿಳಿಸಿದ್ದ. ಜು.13ರಿಂದ 17ರವರೆಗೆ ಮಹಿಳೆ ಅವರು ನೀಡಿದ ಬ್ಯಾಂಕ್ ಖಾತೆಗೆ ತನ್ನ ಖಾತೆಯಲ್ಲಿರುವ ಒಟ್ಟು 65 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು.
ಇದೀಗ ತಾನು ವಂಚನೆಗೊಳಗಾಗಿರುವುದನ್ನು ತಿಳಿದ ಶೀಲಾ (66) ಅವರು ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ಐಟಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.