ಪಿಎಂ ವಿಶ್ವಕರ್ಮ ಯೋಜನೆ | ರಾಜ್ಯಕ್ಕೆ 961 ಕೋಟಿ ರೂ. ಸಾಲ ಸೌಲಭ್ಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ
ಬ್ರಹ್ಮಾವರ, ಡಿ.6: ನಶಿಸುತ್ತಿರುವ ಸಾಂಪ್ರದಾಯಿಕ ಕುಲಕಸಬುಗಳಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಹುತೇಕ ಹಿಂದುಳಿದ ವರ್ಗ ಮತ್ತು ಸಾಂಪ್ರದಾಯಿಕ ಕುಲಕಸುಬು ಎಂದು ಪರಿಗಣಿಸಲಾದ 18 ವೃತ್ತಿಗಳಿಗೆ ಪುನರ್ ಚೈತನ್ಯ ನೀಡಲು 12,000 ಕೋಟಿ ರೂ. ಬ್ಯಾಂಕ್ ಭದ್ರತೆ ನೀಡಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 15 ಮಂದಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಕುಶಲಕರ್ಮಿಗಳಿಗಾಗಿ 4,70,000 ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದು 1,21,500 ಜನ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಪ್ರಥಮ ಹಂತದಲ್ಲಿ 9,61,21,000 ರೂ. ಕಡಿಮೆ ಬಡ್ಡಿಯ ಸಾಲ ಬಿಡುಗಡೆ ಮಾಡಲಾಗಿದೆ ಎಂದವರು ವಿವರಿಸಿದರು.
ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ 6,514 ಜನರಿಗೆ ತರಬೇತಿ ನೀಡಿ 3934 ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 38,79,58,000 ರೂ. ಸಾಲ ಸೌಲಭ್ಯ ವಿತರಿಸಲಾಗಿದೆ. 2086 ಜನರಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಗಿದೆ ಎಂದ ಅವರು, ಕುಶಲಕರ್ಮಿಗಳ ಬದುಕಿಗೆ ನವಚೈತನ್ಯ ನೀಡಲು ಪ್ರದಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಸಂಸದ ಕೋಟ ನುಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ಅಸಿಸ್ಟೆಂಟ್ ಪೋಸ್ಟಲ್ ಸೂಪರಿಡೆಂಟ್ ವಸಂತ್, ಪೋಸ್ಟ್ ಮಾಸ್ಟರ್ ವಿನಯ್, ಅಂಚೆ ಇನ್‌ಸ್ಪೆಕ್ಟರ್ ಎಂ. ಶಂಕರಪ್ಪ ಲಮಾಣಿ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭುಜಂಗ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ನಾರಾಯಣ ಎಸ್, ಆರೂರು ರಾಜು ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.