Udupi |ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ; ಮೂರು ಪ್ರಕರಣಗಳ ತನಿಖೆ ಸಿಐಡಿಗೆ ಒಪ್ಪಿಸಿ ಆದೇಶ
Pradeep Poojary
ಉಡುಪಿ : ಪೆರ್ಡೂರಿನ ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮೂರು ಪ್ರಕರಣಗಳ ತನಿಖೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಸಿಐಡಿಗೆ ಒಪ್ಪಿಸಿ ಡಿಜಿ ಮತ್ತು ಐಜಿಪಿ ಆದೇಶ ಹೊರಡಿಸಿದ್ದಾರೆ.
ಅ.28ರಂದು ಪ್ರದೀಪ್ ಪೂಜಾರಿ ಯುವತಿ ಮನೆಗೆ ಅಕ್ರಮ ಪ್ರವೇಶಿಸಿ ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಕುರಿತು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ, ಅದೇ ದಿನ ರಾತ್ರಿ ಪ್ರದೀಪ್ ಪೂಜಾರಿ ಮೇಲೆ ನಡೆದ ಹಲ್ಲೆ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಮತ್ತು ಅ.30ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಉಡುಪಿ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣಗಳು ದಾಖಲಾಗಿದ್ದವು.
ಪ್ರದೀಪ್ ಪೂಜಾರಿಗೆ ಹಲ್ಲೆ ನಡೆಸಿರುವ ಎಲ್ಲ ಆರೋಪಿಗಳನ್ನು ಬಂಧಿಸದ ಬಗ್ಗೆ ಮತ್ತು ಆತ ಪೊಲೀಸ್ ಕಸ್ಟಡಿ ಸಾವನ್ನಪ್ಪಿರುವುದಾಗಿ ಮತ್ತು ಪ್ರಕರಣದಲ್ಲಿ ಲೋಪ ಎಸಗಿರುವ ಹಿರಿಯಡ್ಕ ಎಸ್ಸೈ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಮೃತರ ಮನೆಯವರು ಮತ್ತು ವಿವಿಧ ಸಂಘಟನೆಗಳು ಆರೋಪ ಮಾಡುತ್ತಿದ್ದವು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದವು.
ಈ ಪ್ರಕರಣದ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಹಿರಿಯಡ್ಕ ಎಸ್ಸೈ ವಿರುದ್ಧ ಶಿಸ್ತು ಮತ್ತು ಆಸ್ಪತ್ರೆಯಲ್ಲಿ ಕಾವಲು ಕರ್ತವ್ಯದಲ್ಲಿದ್ದ ಮಹಿಳಾ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೆ ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನು ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್‌ಗೆ ವಹಿಸಿ ಕೊಡಲಾಗಿತ್ತು. ಅದರಂತೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಪ್ರಾಪ್ತ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.