ಕಾರ್ಕಳ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಭೆ
ಕಾರ್ಕಳ : ಇಲ್ಲಿನ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ವತಿಯಿಂದ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಭೆಯು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಕಾರ್ಕಳ ಜೈನ ಮಠದ ಮಹಾಮಸ್ತಕಾಭಿಷೇಕದ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು, ಯುವಕರು ಹಿರಿಯರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಿದಲ್ಲಿ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಯಲಿದೆ ಎಂದರು
ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಮಹಾಸಂಸ್ಥಾನ ದಿಗಂಬರ ಶ್ರೀ ಜೈನ ಮಠದ ಸ್ವಸ್ತಿಶ್ರೀ ಶ್ರೀಮದಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಮಾತನಾಡಿ, ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳು ಯಶಸ್ಸಿಯಾಗಿ ನಡೆಯುತ್ತವೆ. ಕೇವಲ ಜೈನ ಸಮುದಾಯ ಮಾತ್ರವಲ್ಲ ಸಮಸ್ತ ಸಮುದಾಯಕ್ಕೆ ಕೂಡ ಇವರ ಇರುವಿಕೆ ಬಲ ಎಂದ ಅವರು, ಜೈನ ಸಮುದಾಯದ ಶ್ರಾವಕ ಶ್ರಾವಕಿಯರು ಕೇವಲ ಹೆಸರಿಗೆ ಮಾತ್ರ ಜೈನರಾಗಿರದೆ ಆಚರಣೆಯಲ್ಲಿ ಜೈನರಾಗಬೇಕು. ನಮ್ಮಲಿರುವ ಅಹಂಕಾರವನ್ನು ತ್ಯಾಗ ಮಾಡುವ ಮೂಲಕ ಜೈನ ಸಮುದಾಯದ ಏಕತೆ ಹಾಗೂ ಬದ್ಧತೆಯನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಎಲಾಚಾರ್ಯ 108 ಶ್ರೀ ಪ್ರಸಂಗ ಸಾಗರ ಮುನಿಮಹಾರಾಜ, ಕಾರ್ಕಳ ಶ್ರೀ ಕ್ಷೇತ್ರ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿಪುಷ್ಪರಾಜ್ ಜೈನ್, ಕೋಶಾಧಿಕಾರಿ ಮೋಹನ್ ಪಡಿವಾಳ್, ಹಿರಿಯ ಉಪಾಧ್ಯಕ್ಷ ಅನಂತರಾಜ್ ಪೂವಣಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಾರ್ಯದರ್ಶಿ ಸುನೀಲ್ ಕುಮಾರ್ ಬಜಗೋಳಿ ವಂದಿಸಿದರು.