×
Ad

ಆವೆ ಮಣ್ಣು, ಕೆಂಪು ಕಲ್ಲು, ಮರಳು ಸಮಸ್ಯೆ ಪರಿಹರಿಸಲು ಆಗ್ರಹಿಸಿ ಧರಣಿ

Update: 2025-10-13 20:02 IST

ಕುಂದಾಪುರ : ಹಂಚು ಕೈಗಾರಿಕೆಗೆ ಅಗತ್ಯವಿರುವ ಆವೆ ಮಣ್ಣು, ನಿರ್ಮಾಣ ಉದ್ಯಮಕ್ಕೆ ಅಗತ್ಯವಿರುವ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಪರಿಹರಿಸಲು ಒತ್ತಾಯಿಸಿ ವಿವಿಧ ವಿಭಾಗದ ಕಾರ್ಮಿಕರು ಸೋಮವಾರ ಸಂಜೆ ಕುಂದಾಪುರ ತಹಶೀಲ್ದಾರರ ಕಚೇರಿ ಎದುರು ಧರಣಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇರ್ಖ ವಿ. ಮಾತನಾಡಿ, ಹಂಚು ಮತ್ತು ಕಟ್ಟಡ ನಿರ್ಮಾಣ ಉದ್ಯೋಗ ನಂಬಿ ಬದುಕುತ್ತಿರುವ ಸಹಸ್ರಾರು ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ ಎಂದು ಹೇಳಿದರು.

ಬ್ರಹ್ಮಾವರದಲ್ಲಿ ಸ್ಥಾಪಿಸಲು ಉದ್ದೇಶಿಸಿದ ಇಎಸ್‌ಐ ಆಸ್ಪತ್ರೆ ಶೀಘ್ರ ನಿರ್ಮಾಣ, ಬೀಡಿ ಕಾರ್ಮಿಕರಿಗೆ 2018 ರಿಂದಲೂ ಬಾಕಿ ಇರುವ ಕನಿಷ್ಠ ಕೂಲಿ ತುಟ್ಟಿಭತ್ಯೆ ಬಿಡುಗಡೆಗೊಳಿಸುವಂತೆ, ಪ್ರಾವಿಡೆಂಟ್ ಫಂಡ್ ಯೋಜನೆಗೆ ಸೇರ್ಪಡೆಗೊಳ್ಳುವ ಆದಾಯ ಮಿತಿ 36,000ಕ್ಕೆ ಹೆಚ್ಚಿಸಲು, ಸಾರಿಗೆ ಕಲ್ಯಾಣ ಮಂಡಳಿಗೆ ಅನುದಾನ ಬಿಡುಗಡೆಗೊಳಿಸಲು, ಕಟ್ಟಡ ಕಾರ್ಮಿಕರ 1996 ಕಾನೂನು ಉಳಿಸಿಕೊಳ್ಳುವಂತೆ, ಕಲ್ಯಾಣ ಮಂಡಳಿ ನಿಧಿ ದುರುಪಯೋಗ ತಡೆಗಟ್ಟುವಂತೆ, ಅಂಗನವಾಡಿ ಕೇಂದ್ರದಲ್ಲಿ ಎಫ್‌ಆರ್‌ಎಸ್ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಅಧ್ಯಕ್ಷ ವಿ.ನರಸಿಂಹ, ಕಟ್ಟಡ ಸಂಘದ ಗೌರವ ಅಧ್ಯಕ್ಷ ಚಿಕ್ಕ ಮೊಗವೀರ, ಬೀಡಿ ಕಾರ್ಮಿಕ ಸಂಘದ ಮಹಾಬಲ ವಡೇರಹೋಬಳಿ ಮಾತನಾಡಿದರು. ಬಳಿಕ ಈ ಕುರಿತ ಮನವಿಯನ್ನು ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಹೆಂಚು ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಪಂಜು ಜಿ.ಡಿ., ವಾಸು, ಚಂದ್ರ ಪೂಜಾರಿ, ಆನಂದ್ ಶೆಟ್ಟಿ, ಕಟ್ಟಡ ಸಂಘದ ರತ್ನಾಕರ್ ಆಚಾರ್, ರಾಜ ಬಿ.ಟಿ.ಆರ್. ಉಪಸ್ಥಿತರಿದ್ದರು. ಹೆಂಚು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುರೇಂದ್ರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News