ಉಡುಪಿ ಜಿಲ್ಲೆಯಲ್ಲಿ ಮಳೆ: ಮನೆಗಳಿಗೆ ಹಾನಿ
ಉಡುಪಿ, ಸೆ.3: ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆಯಿಂದ ಮೂರು ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಸುಮಾರು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ ವರದಿ ಬಂದಿದೆ.
ಕಾಪು ತಾಲೂಕು ಮಟ್ಟು ಗ್ರಾಮದ ಶೀನ ಎಂಬವರ ಮನೆ ಗೋಡೆ ಭಾಗಶ: ಕುಸಿದಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕು ಕಂದಾವರ ಗ್ರಾಮದ ಸಣ್ಣ ದೇವಾಡಿಗ ಎಂಬವರ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದೆ. ಇದರಿಂದ 70,000ಕ್ಕೂ ಅಧಿಕ ನಷ್ಟವಾಗಿರುವು ದಾಗಿ ತಿಳಿದುಬಂದಿದೆ.
ಇನ್ನು ಕುಂದಾಪುರ ತಾಲೂಕು ಅಜ್ರಿ ಗ್ರಾಮದ ರಾಜೀವ ಶೆಟ್ಟಿ ಎಂಬವರ ಮನೆಯೂ ಮಳೆಯಿಂದ ಭಾಗಶ: ಹಾನಿಗೊಂಡಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿಉಡುಪಿ ಜಿಲ್ಲೆಯಲ್ಲಿ ಸರಾಸರಿ 44.4ಮಿ.ಮೀ. ಮಳೆಯಾಗಿದೆ.
ಬೈಂದೂರಿನಲ್ಲಿ ಅತ್ಯಧಿಕ 75.6ಮಿ.ಮೀ. ಮಳೆಯಾದರೆ, ಹೆಬ್ರಿಯಲ್ಲಿ 64, ಕುಂದಾಪುರದಲ್ಲಿ 45.9, ಕಾರ್ಕಳದಲ್ಲಿ 33.7, ಬ್ರಹ್ಮಾವರದಲ್ಲಿ 25.1, ಉಡುಪಿಯಲ್ಲಿ 22.6 ಹಾಗೂ ಕಾಪುವಿನಲ್ಲಿ 16.5ಮಿ.ಮೀ. ಮಳೆಯಾದ ವರದಿಗಳು ಬಂದಿವೆ.