ಕಾಪು: ರವಿ ಫ್ರೆಂಡ್ಸ್ ಕಟಪಾಡಿ ವತಿಯಿಂದ ಕಳೆದ 14 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ವೇಷ ಧರಿಸಿ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗಾಗಿ ವಿನಿಯೋಗಿಸುತ್ತಿರುವ ರವಿ ಕಟಪಾಡಿ, ಈ ಬಾರಿಯೂ ವಿಶಿಷ್ಟ ವೇಷ ಧರಿಸಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ವಿನಿಯೋಗಿಸಲು ನಿರ್ಧಾರ ಮಾಡಿದ್ದಾರೆ.

ಕಳೆದ 10 ವರ್ಷಗಳಲ್ಲಿ ನಮ್ಮ ತಂಡದಿಂದ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಒಟ್ಟು 1.85 ಕೋಟಿ ಮೊತ್ತವನ್ನು 204 ಅನಾರೋಗ್ಯ ಪೀಡಿತ ಪುಟಾಣಿ ಮಕ್ಕಳಿಗೆ ಹಸ್ತಾಂತರಿಸಿ, ಅವರ ಚಿಕಿತ್ಸೆಗೆ ನೆರವು ನೀಡಿದ್ದೇವೆ. ಕಳೆದ 14 ವರ್ಷಗಳಿಂದ ಈ ಸೇವೆ ಮಾಡಿಕೊಂಡು ಬಂದಿದ್ದು ಈ ಬಾರಿ ತಂಡವು 15ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ವೇಷ ಧರಿಸಲು ಮುಂದಾಗಿದೆ ಎಂದು ರವಿ ಕಟಪಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ವರ್ಷ ತಮ್ಮ ಹಾಗೂ ತಂಡದ ಸದಸ್ಯರ ಕೊನೆಯ ಕೃಷ್ಣ ಜನ್ಮಾಷ್ಟಮಿ ವೇಷವಾಗಿದ್ದು, ಇನ್ನು ಮುಂದೆ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸುವುದಿಲ್ಲ. ಹಾಗಾಗಿ ಈ ಬಾರಿ ದಾನಿಗಳು ಹೆಚ್ಚಿನ ಸಹಾಯಧನ ನೀಡಬೇಕು. ಸೆ.4 ಮತ್ತು 5ರಂದು ಅಷ್ಟಮಿ ಸಂದರ್ಭದಲ್ಲಿ ಸಮುದ್ರ ಜೀವಿಯೊಂದರ ವಿಶಿಷ್ಟ ವೇಷ ಧರಿಸಿ ನಗರದೆಲ್ಲೆಡೆ ಸಂಚಾರ ಮಾಡಿ ಹಣ ಸಂಗ್ರಹ ಮಾಡುತ್ತೇವೆ. ಈ ವರ್ಷ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧರಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಂಡದ ಮಹೇಶ್ ಶೆಣೈ, ಹರ್ಷ, ಶ್ರವಣ್, ಆಶಿಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor