ಕುಂದಾಪುರ: ಅಕ್ರಮ ಸಕ್ರಮ ಬಗರ್ ಹುಕುಂನಡಿ ಬೈಂದೂರಲ್ಲಿ 2,636 ಅರ್ಜಿ, ವಂಡ್ಸೆ ಹೋಬಳಿಯಲ್ಲಿ 1,963 ಅರ್ಜಿ ಒಟ್ಟು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 4 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಬಾಕಿ ಇವೆ. ಇನ್ನು ಮುಂದೆ ಪ್ರತಿ ಶುಕ್ರವಾರ ಸಭೆ ನಡೆಸಿ, ಪ್ರತಿವಾರ ಕನಿಷ್ಠ 25 ಅರ್ಜಿ ವಿಲೇವಾರಿ ನಡೆಸಿ, ಮುಂದಿನ 4-5 ತಿಂಗಳಲ್ಲಿ ಅರ್ಹ ಎಲ್ಲ ಅರ್ಜಿ ವಿಲೇವಾರಿಗೆ ಪ್ರಯತ್ನಿಸಲಾಗುವುದು ಎಂದು ಬೈಂದೂರು ಕ್ಷೇತ್ರದ ಅಕ್ರಮ - ಸಕ್ರಮ ಹೆಚ್ಚುವರಿ ಸಮಿತಿ ಅಧ್ಯಕ್ಷ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ.

ಬೈಂದೂರು ಮಿನಿ ವಿಧಾನಸೌಧದಲ್ಲಿರುವ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಂಡ್ಸೆ ಹೋಬಳಿಯ ಅಕ್ರಮ - ಸಕ್ರಮ ಹೆಚ್ಚುವರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಏಳು ಮಂದಿಗೆ ಹಕ್ಕುಪತ್ರ ವಿತರಿಸಿ ಮಾತನಾಡುತಿದ್ದರು.

ಸಚಿವರು ಸಭೆ ನಡೆಸಿ, 3 ತಿಂಗಳಲ್ಲಿ ಜಿಲ್ಲೆಯಲ್ಲಿ 50 ಸಾವಿರ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ನಮ್ಮಲ್ಲೂ ಬಾಕಿ ಇರುವ ಬಗರ್ ಹುಕುಂನಡಿ 30-40 ವರ್ಷ ಗಳಿಂದ ಕೃಷಿ ಮಾಡುತ್ತಿರುವ ಜಾಗದ ಹಕ್ಕುಪತ್ರ ಕೊಡಿಸುವ ಕಾರ್ಯ ಮಾಡಲಾಗುವುದು. ತಹಶಿಲ್ದಾರ್, ಕಂದಾಯ ನಿರೀಕ್ಷಕರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಾರೆ ಎಂದರು.

ಸಮಸ್ಯೆ ಇದ್ದ ಕಡೆಗಳಲ್ಲಿ ಸಮಿತಿಯವರು ಕೂಡ ಭೇಟಿ ನೀಡುತ್ತೇವೆ. ಯಾವುದೇ ಸಮಸ್ಯೆಯಿದ್ದರೂ, ಕೃಷಿಯಿದ್ದರೆ, ಬಗೆಹರಿಸಲಾಗುವುದು. ವಿಎ ಗಳು ಕೂಡ ಕಾರ್ಯೋತ್ತಡದ ನಡುವೆಯೂ ಬಡ ವರ್ಗದ 5-10 ಸೆನ್ಸ್ ನವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ರಾಘವೇಂದ್ರ ಹೊಸ್ಕಳಿ, ಸಮಿತಿಯ ಶ್ರೀನಿವಾಸ ಸೌಡ, ಹೇಮಾ ಆರ್.ಪೂಜಾರಿ, ದಿನೇಶ್ ನಾಯ್ಕ್ ಹಳ್ಳಿಹೊಳೆ ಮತ್ತಿತರರು ಉಪಸ್ಥಿತರಿದ್ದರು.

‘ನನ್ನನ್ನು ಸರಕಾರ ಕಾನೂನು ಪ್ರಕಾರವೇ ಹೆಚ್ಚುವರಿ ಸಮಿತಿ ಅಧ್ಯಕ್ಷನಾಗಿ ಆಯ್ಕೆ ಮಾಡಿರುವುದು. ಕಳೆದ ಹಲವು ವರ್ಷಗಳಿಂದ ಹೆಚ್ಚುವರಿ ಸಮಿತಿ ರಚಿಸಲಾಗುತ್ತಿದೆ. ನಾನು 4 ಬಾರಿ ಶಾಸಕನಾಗಿದ್ದೆ. ನನ್ನ ಕಾಲದಲ್ಲೂ ಹೆಚ್ಚುವರಿ ಸಮಿತಿ, ಎಸಿ ಸಮಿತಿ ಮಾಡಲಾಗಿತ್ತು. ಆದರೆ ನಾನು ಕೋರ್ಟ್‌ಗೆ ಹೋಗಿಲ್ಲ. ಆದರೆ ನನ್ನ ವಿರುದ್ದ ಕೋರ್ಟ್‌ಗೆ ಹೋಗಿರುವುದು ನೋವಾಗಿದೆ. 3 ವರ್ಷದಿಂದ ಯಾವುದೇ ಅರ್ಜಿ ವಿಲೇವಾರಿ ಆಗಿಲ್ಲ. 29 ಬಾರಿ ಹೈಕೋರ್ಟ್‌ನಲ್ಲಿ ನಮ್ಮ ವಿಚಾರಣೆ ನಡೆದು, ಕೊನೆಗೆ ಸರಕಾರದ ಆದೇಶವನ್ನು ಎತ್ತಿ ಹಿಡಿದು, ನಮ್ಮ ಪರ ಕೋರ್ಟ್ ತೀರ್ಪು ನೀಡಿದೆ’

-ಗೋಪಾಲ ಪೂಜಾರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor