ಕಾಂತರಾಜ್ ಆಯೋಗದ ವರದಿಯ ಬಿಡುಗಡೆ, ಮುಸ್ಲಿಮರ ಮೀಸಲಾತಿ ಏರಿಸಲು ಆಗ್ರಹಿಸಿ ಎಸ್ ಡಿ ಪಿ ಐ ಧರಣಿ
ಉಡುಪಿ: ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ದಿಗಾಗಿ ಕಾಂತರಾಜ್ ಆಯೋಗದ ವರದಿಯ ಬಿಡುಗಡೆ ಹಾಗೂ ಮುಸ್ಲಿಮರ 2ಬಿ ಮೀಸಲಾತಿಯನ್ನು ಶೇ.8ಕ್ಕೆ ಏರಿಸುವಂತೆ ಆಗ್ರಹಿಸಿ ಎಸ್ ಡಿ ಪಿ ಐ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಉಡುಪಿ ತಾಲೂಕು ಕಚೇರಿ ಎದುರು ಇಂದು ಧರಣಿ ನಡೆಸಲಾಯಿತು.
ಬಸವರಾಜ ಬೊಮ್ಮಾಯಿ ಸರ್ಕಾರವು ಒಬಿಸಿ ವರ್ಗದಿಂದ ಮುಸ್ಲಿಮರನ್ನು ಹೊರಗಿಡಲು ನಿರ್ಧರಿಸಿ 2ಬಿ ಕೆಟಗರಿಯಡಿ ಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು. ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡಲೇ ಮುಸ್ಲಿಂಮರ 2ಬಿ ಮೀಸಲಾತಿ ರದ್ದತಿಯ ಬಿಜೆಪಿ ಸರ್ಕಾರದ ಶಿಫಾರಸ್ಸನ್ನು ರದ್ದು ಮಾಡಿ ಕೋರ್ಟ್ ದಾವೆಯನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 18 ರಷ್ಟಿದೆ. ಆದ್ದರಿಂದ 2ಬಿ ಮೀಸಲಾತಿಯ ಪ್ರಮಾಣವನ್ನು ಶೇ.8ಕ್ಕೆ ಏರಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡದೆ ಕೂಡಲೇ ದೃಡವಾದ ತೀರ್ಮಾನ ಮಾಡಿ, ಚುನಾವಣೆಯಲ್ಲಿ ನೀಡಲಾದ ಭರವಸೆಯನ್ನು ಈಡೇರಿಸ ಬೇಕು. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮುಸ್ಲಿಮರ ಸಂಖ್ಯೆ ತೀರಾ ಕಡಿಮೆ ಇದೆ. ಈ ಅನ್ಯಾಯವನ್ನು ಸರಿಪಡಿಸಿ ಅಭಿವೃದ್ದಿ ಸೂಚ್ಯಂಕದಲ್ಲಿ ಸರ್ವ ಜಾತಿ ಸಮುದಾಯಗಳ ಸರಾಸರಿ ಮಟ್ಟಕ್ಕೆ ಏರಿಸುವುದು ಸರ್ಕಾರದ ಜವಾಬ್ದಾರಿ ಯಾಗಿದೆ. ಜಾತಿವಾದಿಗಳು, ಕೋಮುವಾದಿಗಳಿಂದ ಎದುರಾದ ಸವಾಲು, ಅದೆಷ್ಟು ಅಡೆತಡೆಗಳನ್ನು ಮೀರಿ ನಿಂತು ಜಾತಿ ಜನಗಣತಿಯನ್ನು ಬಹಿರಂಗಗೊಳಿಸುವ ಮೂಲಕ ಬಿಹಾರದ ಸಾಮಾಜಿಕ ನ್ಯಾಯದ ಆಗ್ರಹದ ಹೇಬ್ಬಾಗಿಲನ್ನು ಸಿಎಂ ನಿತಿಶ್ ಕುಮಾರ್ ತೆರೆದು ಬಿಟ್ಟಿದ್ದಾರೆ. ಈ ಮಾದರಿಯನ್ನು ಅನುಸರಿಸಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ , ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಬೇಕೆಂದು ಧರಣಿ ನಿರತರು ಒತ್ತಾಯಿಸಿದರು.
ಧರಣಿಯಲ್ಲಿ ಧರ್ಮಗುರು ಫಾದರ್ ವಿಲಿಯಂ ಮಾರ್ಟಿಸ್, ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಶ್ರಫ್ ಬಾವ, ವಿಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾಧ್ಯಕ್ಷರಾದ ನಾಝಿಯ ನಸ್ರುಲ್ಲಾ , ಕಂಡ್ಲೂರು ಗ್ರಾಪಂ ಅಧ್ಯಕ್ಷೆ ನೌಶಿನ್ ನಸ್ರತ್, ಮುಖಂಡರಾದ ಹನೀಫ್ ಮುಳೂರು, ಮಜೀದ್ ಪೊಲ್ಯ ಮೊದಲಾದವರು ಉಪಸ್ಥಿತರಿದ್ದರು.